ಹಾಂಗ್ ಕಾಂಗ್ ನವೆಂಬರ್ 27: ಹಾಂಗ್ ಕಾಂಗ್ ನ ವಸತಿ ಸಮುಚ್ಚಯದ ಬಹುಮಹಡಿ ಕಟ್ಟಡದಲ್ಲಿ ನಡೆದ ಅಗ್ನಿದುರಂತಕ್ಕೆ ಸಾವನಪ್ಪಿದವರ ಸಂಖ್ಯೆ 44 ಕ್ಕೆ ಏರಿಕೆಯಾಗಿದೆ. ಸುಮಾರು 280ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಮಧ್ಯಾಹ್ನ ವಸತಿ ಸಮುಚ್ಛಯದ ನಾಲ್ಕು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನವೀಕರಣ ಕೆಲಸಕ್ಕಾಗಿ ಕಟ್ಟಡಗಳ ಸುತ್ತಲು ಬಿದಿರಿನ ಕಂಬಗಳನ್ನು ಅಳವಡಿಸಿದ್ದರಿಂದ ಬೆಂಕಿ ಮತ್ತಷ್ಟು ವ್ಯಾಪಿಸಿತ್ತು. ಬೆಂಕಿಯ ಜ್ವಾಲೆಗೆ ಸಿಕ್ಕಿದವರಲ್ಲಿ ಹೆಚ್ಚಿನವರು ವೃದ್ಧರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
200 ಅಗ್ನಿಶಾಮಕ ವಾಹನಗಳು ಮತ್ತು 100 ಆ್ಯಂಬುಲೆನ್ಸ್‌ಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಇದೀಗ ಬೆಂಕಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಉತ್ತರ ತೈ ಪೋ ಜಿಲ್ಲೆಯಲ್ಲಿ 1980ರಲ್ಲಿ ನಿರ್ಮಿಸಲಾದ ಈ ವಸತಿ ಸಮುಚ್ಛಯ ಒಟ್ಟು 8 ಕಟ್ಟಡಗಳನ್ನು ಹೊಂದಿದೆ. ಇಲ್ಲಿರುವ 2 ಸಾವಿರ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 4,800 ನಿವಾಸಿಗಳು ವಾಸಿಸುತ್ತಿದ್ದಾರೆ. ಇತ್ತೀಚೆಗೆ ಕಟ್ಟಡಗಳ ನವೀಕರಣ ಕೆಲಸ ಆರಂಭವಾಗಿತ್ತು.



