ಔರಂಗಾಬಾದ್ ಜುಲೈ 09: ಚಲಿಸುವ ರೈಲಿನ ಮೊದಲ ದರ್ಜೆ (First Class AC) ಬೋಗಿಯನ್ನು ಬಲೂನ್ಗಳು, ನೈಜ ಹೂವುಗಳು ಹಾಗೂ ಸಾವಿರಾರು ಗುಲಾಬಿ ದಳಗಳಿಂದ ‘ಹನಿಮೂನ್ ಸೂಟ್’ ಮಾದರಿಯಲ್ಲಿ ಅಲಂಕರಿಸಿದ ವೈರಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ರೈಲು ಸಂಖ್ಯೆ 110002 ನಾಂದೇಡ್ಗ್ರಾಮ್ ಎಕ್ಸ್ಪ್ರೆಸ್ನಲ್ಲಿ ಈ ಘಟನೆ ನಡೆದಿದ್ದು, ನಿಯಮ ಉಲ್ಲಂಘನೆಗೆ ಆಸ್ಪದ ನೀಡಿದ ಆರೋಪದ ಮೇಲೆ ಕರ್ತವ್ಯದಲ್ಲಿದ್ದ ಮುಖ್ಯ ಟಿಕೆಟ್ ಇನ್ಸ್ಪೆಕ್ಟರ್ (CTI) ಗಿರೀಶ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಮಹಾರಾಷ್ಟ್ರ ಮೂಲದ ‘ರಾಹತ್ ರೂಮ್ ಡೆಕೋರೇಶನ್’ ಎಂಬ ಖಾಸಗಿ ಸಂಸ್ಥೆ ಈ ಅಲಂಕಾರದ ಹಿಂದಿನ ಸೂತ್ರಧಾರಿಯಾಗಿದೆ. ಜಲ್ನಾದ ನವದಂಪತಿಗಳಿಗಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. ದಂಪತಿಗಳು ಔರಂಗಾಬಾದ್ನಿಂದ ಜಲ್ನಾ ರೈಲು ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಈ ಡೆಕೋರೇಟರ್ಸ್ ತಂಡವು ರೈಲು ನಿಲ್ದಾಣದಲ್ಲಿ ಮುಂಚಿತವಾಗಿ ಎಸಿ ಕ್ಯಾಬಿನ್ ಪ್ರವೇಶಿಸಿ, ಗೋಡೆಗಳ ಮೇಲೆ “ಐ ಲವ್ ಯು” ಎಂದು ಬರೆದು, ಬೆಂಕಿಯ ಅಪಾಯ ತಂದೊಡ್ಡಬಲ್ಲ ಬಲೂನ್ ಹಾಗೂ ಪೇಪರ್ಗಳಿಂದ ಇಡೀ ಕೋಚ್ ಅನ್ನು ಶೃಂಗರಿಸಿದ್ದರು. ಬಳಿಕ ದಂಪತಿಗಳು ಜಲ್ನಾ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ರೈಲು ಚಲಿಸುತ್ತಿರುವಾಗ ಕ್ಯಾಬಿನ್ ಒಳಗಿನ ರೋಮ್ಯಾಂಟಿಕ್ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆನ್ಲೈನ್ನಲ್ಲಿ ವೈರಲ್ ಆಗಿವೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಭಾರತೀಯ ರೈಲ್ವೆ ಇಲಾಖೆ, ಅನುಮತಿಯಿಲ್ಲದೆ ಅಲಂಕಾರಿಕರು ರೈಲು ಬೋಗಿ ಪ್ರವೇಶಿಸಿರುವುದನ್ನು ಗಂಭೀರ ನಿಯಮ ಉಲ್ಲಂಘನೆ ಎಂದು ಪರಿಗಣಿಸಿದೆ. ಸುರಕ್ಷತೆ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಇಂತಹ ಕೃತ್ಯಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು, ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದೊಂದು ಸ್ಮರಣೀಯ ರೋಮ್ಯಾಂಟಿಕ್ ಐಡಿಯಾ ಎಂದು ಶ್ಲಾಘಿಸಿದರೆ, ಇನ್ನು ಹಲವರು ಬಲೂನ್ ಮತ್ತು ಒಣ ಹೂವುಗಳು ಚಲಿಸುವ ರೈಲಿನಲ್ಲಿ ಭಾರಿ ಬೆಂಕಿಯ ಅಪಾಯವನ್ನು (Fire Hazard) ಉಂಟುಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.