ಮಡಿಕೇರಿ ಡಿಸೆಂಬರ್ 15: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಮಹಿಳೆಯನ್ನು ನೋಡಲು ಮಡಿಕೇರಿ ಬಂದ ಮಂಡ್ಯದ ಹುಡುಗ ಹನಿಟ್ರ್ಯಾಪ್ ಗೆ ಸಿಲುಕಿ ಹಣ ಹಾಗೂ ವಸ್ತುಗಳನ್ನು ಕಳೆದುಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.


ಮದ್ದೂರು ಮೂಲದ ಮಹೇಶ್ ಎಂಬುವವರನ್ನು ಮನೆಯೊಂದರಲ್ಲಿ ಕೂಡಿಹಾಕಿ ಹಣಕ್ಕಾಗಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಆತನ ಬಳಿಯಿದ್ದ ಅಮೂಲ್ಯ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಆತ ಅಪಾಯದ ಸ್ಥಳದಿಂದ ತಪ್ಪಿಸಿಕೊಂಡು ಬಂದಿದ್ದು, ಮಡಿಕೇರಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ.

ಮಂಡ್ಯದ ಮದ್ದೂರು ಮೂಲದವರಾದ ಮಹೇಶ್‌ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಪರಿಚಯ, ತೀವ್ರ ಚಾಟಿಂಗ್‌ಗೆ ಮರಳಿತ್ತು. ಒಮ್ಮೆ ಆಕೆ ಮಡಿಕೇರಿಗೆ ಮಹೇಶ್‌ನನ್ನು ಆಹ್ವಾನಿಸಿದ್ದಳು. ಶುಕ್ರವಾರ ಸಂಜೆ ಆಕೆಗಾಗಿ ಮಡಿಕೇರಿಗೆ ತೆರಳಿದ್ದ. ಒಂಟಿಯಾಗಿ ಬಂದಿರುವ ಮಹೇಶ್‌ನನ್ನು ಕಂಡ ಮಹಿಳೆ ಮಂಗಳಾದೇವಿ ಮನೆಯೊಂದಕ್ಕೆ ಕರೆದೊಯ್ದಿದ್ದಾಳೆ

ಕೆಲಹೊತ್ತು ಮಹೇಶನ ಜೊತೆ ಪಾನೀಯ ಸೇವಿಸಿದ ಮಹಿಳೆ ಸಂಬಂಧಿಕರೊಬ್ಬರು ಮೃತಪಟ್ಟಿರುವುದಾಗಿ ತುರ್ತು ಕರೆಬಂದಿದ್ದಾಗಿ ಹೇಳಿ ಅಲ್ಲಿಂದ ಹೊರಬಂದಿದ್ದಾಳೆ. ಅದೇ ಸಮಯದಲ್ಲಿ ಮನೆಗೆ ನುಗ್ಗಿದ ನಾಲ್ವರು ಯುವಕರು ಮಹೇಶ ಬಳಿ ಇದ್ದ ಹಣ ಹಾಗೂ ವಸ್ತುಗಳನ್ನು ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮನೆಯಲ್ಲಿ ಕೂಡಿಹಾಕಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಮಧ್ಯೆ ಶೌಚಕ್ಕೆ ಹೋಗುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಅರಬೆತ್ತಲೆಯಲ್ಲೇ ಓಡಿ ಹೋಗಿ ಮಡಿಕೇರಿ ನಗರ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಕೃತ್ಯವನ್ನು ಹನಿಟ್ರ್ಯಾಪ್ ಪ್ರಕರಣವೆಂದು ಪರಿಗಣಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share Information