ಶಿವಮೊಗ್ಗ, ಏಪ್ರಿಲ್ 14: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ತಿಂಗಳು ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ‘ಹಂಸಿನಿ’ ಎಂಬ ನೀರಾನೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದೆ. ಕೇವಲ 25 ದಿನಗಳ ಅಂತರದಲ್ಲಿ ವೈದ್ಯೆ ಮತ್ತು ನೀರಾನೆ ಎರಡೂ ಸಾವನ್ನಪ್ಪಿದೆ.

ಗರ್ಭಿಣಿಯಾಗಿದ್ದ ಹಂಸಿನಿ ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಗರ್ಭದಲ್ಲೇ ಮರಿ ಮೃತಪಟ್ಟಿದ್ದರಿಂದ (Stillbirth) ಹಂಸಿನಿಯ ದೇಹದಲ್ಲಿ ವಿಷಕಾರಿ ಅಂಶಗಳು ಹರಡಿ ಸೋಂಕು ಕಾಣಿಸಿಕೊಂಡಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನವನದ ತಜ್ಞ ವೈದ್ಯರು ಹಾಗೂ ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನ ತಜ್ಞರು ಸತತ ಚಿಕಿತ್ಸೆ ನೀಡಿದರೂ, ಚಿಕಿತ್ಸೆಗೆ ಸ್ಪಂದಿಸದ ಹಂಸಿನಿ ಮಂಗಳವಾರ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದೆ.
12 ವರ್ಷದ ಹಂಸಿನಿಯ ಬದುಕು ದುರಂತಗಳ ಸರಮಾಲೆಯಾಗಿತ್ತು. ಈ ಹಿಂದೆಯೂ ಎರಡು ಬಾರಿ ಮರಿ ಹಾಕಿದ್ದ ಹಂಸಿನಿ, ಆ ಎರಡೂ ಮರಿಗಳನ್ನು ಕಳೆದುಕೊಂಡಿತ್ತು. ಈ ಬಾರಿ ಮೂರನೇ ಮರಿಯ ನಿರೀಕ್ಷೆಯಲ್ಲಿದ್ದಾಗ ಮಾರ್ಚ್ 19ರಂದು ದುರ್ಘಟನೆ ನಡೆದಿತ್ತು. ಅಂದು ರಾತ್ರಿ ಗರ್ಭಿಣಿಯಾಗಿದ್ದ ಹಂಸಿನಿಯ ಆರೋಗ್ಯ ತಪಾಸಣೆ ಮಾಡಲು ಹೋದಾಗ, ಅದು ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ನಡೆಸಿತ್ತು.