ಬೆಂಗಳೂರು ಸೆಪ್ಟೆಂಬರ್ 09: ಸುಜಾತಾ ಭಟ್ ಪರ ವಕೀಲರಾಗಿದ್ದ ಎನ್. ಮಂಜುನಾಥ್ ಅವರಿಗೆ ಧರ್ಮಸ್ಥಳ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ಐಟಿ ನೀಡಿದ ಸಮನ್ಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಧರ್ಮಸ್ಥಳದಲ್ಲಿ ಹೂತ ಶವಗಳ ಅಸ್ಥಿಪಂಜರ ಹೊರ ತೆಗೆಯುವಾಗ ತನಿಖಾ ವಿವರ ಬಹಿರಂಗಪಡಿಸುವ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಆರೋಪ ಪ್ರಕರಣದಲ್ಲಿ ವಕೀಲ ಎನ್‌.ಮಂಜುನಾಥ್‌ಗೆ ವಿಶೇಷ ತನಿಖಾ ದಳ ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ. ಮಂಜುನಾಥ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಎಸ್‌ಐಟಿಗೆ ತಾಕೀತು ಮಾಡಿದೆ.
ಸುಜಾತ ಭಟ್‌ ಪರ ವಕೀಲ ಎನ್‌. ಮಂಜುನಾಥ್‌ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ.ಸಚಿನ್‌ ಶಂಕರ್‌ ಮಗದಂ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.

ಎಸ್‌ಐಟಿ ಸೆಪ್ಟೆಂಬರ್ 1ರಂದು ಜಾರಿಗೊಳಿಸಿರುವ ಸಮನ್ಸ್‌ಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಿರುವ ಪೀಠ, ಪ್ರತಿವಾದಿಗಳಾದ ಸರಕಾರ ಮತ್ತು ಎಸ್‌ಐಟಿಗೆ ನೋಟಿಸ್‌ ಜಾರಿಗೊಳಿಸಿದೆ. ಜುಲೈ 30 ರಂದು ವಕೀಲ ಮಂಜುನಾಥ್‌, ಧರ್ಮಸ್ಥಳ ಸಮೀಪ ಅಸ್ಥಿಪಂಜರಗಳ ಸಂಖ್ಯೆ ಮಾಹಿತಿ ಬಹಿರಂಗಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು

Share Information