ನವದೆಹಲಿ ನವೆಂಬರ್ 10: ದೆಹಲಿ ಕೆಂಪುಕೋಟೆ ಸಮೀಪದ ಮೆಟ್ರೋ ನಿಲ್ದಾಣದ ಕಾರು ಪಾರ್ಕಿಂಗ್ ಬಳಿ ನಿಲ್ಲಿಸಿದ ಕಾರು ಸ್ಪೋಟಗೊಂಡ ಘಟನೆ ನಡೆದಿದೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ 8 ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇದು ಭಯೋತ್ಪಾದನೆ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ.

ಸ್ಪೋಟಕ್ಕೆ ಹಲವು ವಾಹನಗಳು ಜಖಂಗೊಂಡಿದ್ದು, ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ದೊಡ್ಡ ಮಟ್ಟದ ಸ್ಪೋಟವಾಗಿದ್ದು, ಕಾರು ಸ್ಪೋಟದ ಬಳಿಕ ಅಲ್ಲೆ ಇದ್ದ ಹಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ-1ರ ಬಳಿ ಸಂಭವಿಸಿದ ಸ್ಫೋಟದಲ್ಲಿ 8 ಕಾರುಗಳು ಹಾಗೂ 5ಕ್ಕೂ ಹೆಚ್ಚು ಆಟೋಗಳೂ ಅಗ್ನಿ ಜ್ವಾಲೆಯಲ್ಲಿ ಧಗಧಗಿಸಿವೆ. ದೆಹಲಿ ಸೇರಿದಂತೆ ರಾಷ್ಟ್ರದ ಅನೇಕ ಕಡೆಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.



