ನಾಸಿಕ್ ಮಾರ್ಚ್ 19: ಪ್ರಮುಖ ರಾಜಕೀಯ ನಾಯಕರ ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗಿದ್ದ ಸ್ವಯಂ ಘೋಷಿತ ಜ್ಯೋತಿಷಿ ‘ಕ್ಯಾಪ್ಟನ್’ ಅಶೋಕ್ ಖರತ್ನನ್ನು ಅತ್ಯಾಚಾರದ ಆರೋಪದಡಿ ನಾಸಿಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 58 ಮಹಿಳೆಯರ ರಹಸ್ಯ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣ ಮಹಾರಾಷ್ಟ್ರದಾದ್ಯಂತ ಭಾರೀ ಸಂಚಲನ ಮೂಡಿಸಿದೆ.

35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ನಾಸಿಕ್ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಖರತ್ನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ವೇಳೆ ಆರೋಪಿಯು ಸಮಾಜದ ಪ್ರಭಾವಿ ಮಹಿಳೆಯರೂ ಸೇರಿದಂತೆ ಒಟ್ಟು 58 ಮಹಿಳೆಯ ಅಶ್ಲೀಲ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿರುವುದು ಪತ್ತೆಯಾಗಿದೆ. ಸರ್ಕಾರವಾಡಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಅಂಧಾ ಶ್ರದ್ಧಾ ನಿರ್ಮೋಲನ್ ಸಮಿತಿ (ANISA) ಈ ಜ್ಯೋತಿಷಿ ವಿರುದ್ಧ ಮೊದಲೇ ಎಚ್ಚರಿಕೆ ನೀಡಿತ್ತು. ಮರ್ಚೆಂಟ್ ನೇವಿಯಲ್ಲಿ ಅಧಿಕಾರಿಯಾಗಿದ್ದ ಖರತ್, ನಿವೃತ್ತಿಯ ನಂತರ ‘ಶಿವನಿಕಾ ಟ್ರಸ್ಟ್’ ಆರಂಭಿಸಿ ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ಎನ್ನಲಾಗಿದೆ. ರಾಜಕಾರಣಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದ ಈತನ ಅಸಲಿ ಮುಖ ಈಗ ಬಯಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯೆಂದು ಹೇಳಿಕೊಳ್ಳುವ ಖರತ್, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ ಸಮ್ಮೋಹನಗೊಳಿಸುತ್ತಿದ್ದ. ಬಳಿಕ ಮಾಟಮಂತ್ರದ ಭಯ ಹುಟ್ಟಿಸಿ ಅಥವಾ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ಎಸಗುತ್ತಿದ್ದ ಎಂದು ಪೊಲೀಸರ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯು ತನ್ನ ಕಚೇರಿಯಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಮಹಿಳೆಯರ ಅಸಭ್ಯ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದ. ಪೊಲೀಸರು ವಶಪಡಿಸಿಕೊಂಡಿರುವ ಪೆನ್ ಡ್ರೈವ್ನಲ್ಲಿ 58 ವಿವಿಧ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ದೃಶ್ಯಗಳಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಸಂತ್ರಸ್ತ 35 ವರ್ಷದ ಮಹಿಳೆ ನೀಡಿದ ದೂರಿನಿಂದ ಈ ದಶಕಗಳ ಕಾಲದ ದಂಧೆ ಈಗ ಬೆಳಕಿಗೆ ಬಂದಿದೆ.