ಮೀರತ್ ಎಪ್ರಿಲ್ 06: ವಿಚ್ಛೇದನ ಪಡೆದ ಮಗಳನ್ನು ಮೌನದ ಬದಲು ಸಂಭ್ರಮದಿಂದ ಮನೆಗೆ ಬರಮಾಡಿಕೊಳ್ಳುವ ಮೂಲಕ ನಿವೃತ್ತ ನ್ಯಾಯಾಧೀಶರೊಬ್ಬರು ಸಮಾಜಕ್ಕೆ ಶ್ರೇಷ್ಠ ಸಂದೇಶ ನೀಡಿದ್ದಾರೆ. ನಿವೃತ್ತ ನ್ಯಾಯಾಧೀಶ ಜ್ಞಾನೇಂದ್ರ ಶರ್ಮಾ ಅವರು ತಮ್ಮ ಪುತ್ರಿ ಪ್ರಣೀತಾ ಶರ್ಮಾ ಅವರಿಗೆ ವಿಚ್ಛೇದನ ಸಿಕ್ಕಿದ ನಂತರ, ಡೋಲು-ನಗಾರಿಗಳೊಂದಿಗೆ ಮೆರವಣಿಗೆ ನಡೆಸಿ ಸಿಹಿ ಹಂಚಿ ಸ್ವಾಗತಿಸಿದ್ದಾರೆ.

ಪ್ರಣೀತಾ ಅವರ ವಿವಾಹವು 2018ರಲ್ಲಿ ಸೇನಾ ಅಧಿಕಾರಿಯೊಬ್ಬರ ಜೊತೆ ನಡೆದಿತ್ತು. ಆದರೆ ವಿವಾಹವಾದ ಕೆಲವೇ ದಿನಗಳಲ್ಲಿ ಅವರಿಗೆ ಸಾಂಸಾರಿಕ ಕಿರುಕುಳ ಆರಂಭವಾಗಿತ್ತು. ಸುಮಾರು 7 ವರ್ಷಗಳ ಕಾಲ ನೋವನ್ನು ಸಹಿಸಿಕೊಂಡಿದ್ದ ಪ್ರಣೀತಾ ಅವರಿಗೆ ಮೀರತ್ನ ಕೌಟುಂಬಿಕ ನ್ಯಾಯಾಲಯ ಈಗ ವಿಚ್ಛೇದನ ನೀಡಿದೆ. ಈ ಸಂದರ್ಭದಲ್ಲಿ ತಂದೆ ಜ್ಞಾನೇಂದ್ರ ಶರ್ಮಾ ಹಾಗೂ ಕುಟುಂಬದವರು ‘I LOVE MY DAUGHTER’ ಎಂದು ಬರೆದಿರುವ ಕಪ್ಪು ಟೀ ಶರ್ಟ್ ಧರಿಸಿ ಮಗಳನ್ನು ಸ್ವಾಗತಿಸಿದರು.
“ಹೆಣ್ಣು ಮಗು ವಸ್ತುವಲ್ಲ. ಗಂಡನ ಮನೆಯಲ್ಲಿ ಆಕೆಗೆ ನೆಮ್ಮದಿ ಇಲ್ಲದಿದ್ದರೆ ಆಕೆಯನ್ನು ಗೌರವದಿಂದ ತವರು ಮನೆಗೆ ಕರೆತರುವುದು ತಂದೆಯ ಕರ್ತವ್ಯ” ಎಂದು ಜ್ಞಾನೇಂದ್ರ ಶರ್ಮಾ ಭಾವುಕರಾಗಿ ನುಡಿದರು.
ಪ್ರಸ್ತುತ ಪ್ರಣೀತಾ ಅವರು ನ್ಯಾಯಾಂಗ ಅಕಾಡೆಮಿಯಲ್ಲಿ ಹಣಕಾಸು ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೌನ ಮುರಿಯಿರಿ, ಸುಮ್ಮನಿರಬೇಡಿ. ಯಾವುದೇ ರೀತಿಯ ಕಿರುಕುಳವನ್ನು ಸಹಿಸಿಕೊಂಡು ಸುಮ್ಮನಿರುವುದು ನಮಗೆ ನಾವೇ ಮಾಡಿಕೊಳ್ಳುವ ಅನ್ಯಾಯ. ಮದುವೆಗೂ ಮುನ್ನ ಆರ್ಥಿಕವಾಗಿ ಸ್ವತಂತ್ರರಾಗಿ, ಸದೃಢರಾಗಿ” ಎಂದು ಪ್ರಣೀತಾ ಶರ್ಮಾ ಕರೆ ನೀಡಿದರು.
ಈ ಎಲ್ಲಾ ಬದಲಾವಣೆಯ ಬಳಿಕ ಪ್ರಣೀತಾ ತಮ್ಮ ಕುಟುಂಬವನ್ನು ದೊಡ್ಡ ಶಕ್ತಿ ಎಂದು ಬಣ್ಣಿಸಿದರು. ಇವರು 2022ರಲ್ಲಿ ಅಪಘಾತದಲ್ಲಿ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು. ಈಗ ತನ್ನ ವಿಚ್ಛೇದನ. ಇಷ್ಟಾದರೂ ಕುಟುಂಬ ತನ್ನೊಂದಿಗೆ ಬೆಂಬಲವಾಗಿ ಇರುವುದಕ್ಕೆ ಪ್ರಣೀತಾ ಸಾರ್ಥಕ ಭಾವನೆ ವ್ಯಕ್ತಪಡಿಸಿದರು.