ಬೆಳ್ತಂಗಡಿ, ಮಾರ್ಚ್ 15: ಬೆಂಗಳೂರು ಮೂಲದ APD ಸಂಸ್ಥೆಯ ಸಹಕಾರದೊಂದಿಗೆ ಸೌತಡ್ಕ ಸೇವಾಧಾಮವು ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಗಳನ್ನು ದಿವ್ಯಾಂಗರಿಗೆ ವಿತರಿಸುವ ಯೋಜನೆಯನ್ನು ರೂಪಿಸಿಕೊಂಡಿದೆ. ಅದರ ಭಾಗವಾಗಿ ಮಾರ್ಚ್ 15ರಂದು ಬೆಳ್ತಂಗಡಿ ತಾಲೂಕಿನ ಸೌತಡ್ಕ ಸೇವಾಧಾಮದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ನಡೆಯಿತು.

ಸೇವಾಧಾಮವು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತನ್ನ 8ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಿತ್ತು. ಇದೇ ತಿಂಗಳಲ್ಲಿ ಮತ್ತಷ್ಟು 32 ಗಾಲಿಕುರ್ಚಿಗಳನ್ನು ವಿತರಿಸುವ ನಿರ್ಧಾರವನ್ನು ಸಂಸ್ಥೆ ಕೈಗೊಂಡಿದ್ದು, ಅದರ ಅಂಗವಾಗಿ ಉಡುಪಿಯ ನಿಹಾಲ್ ವಿಲ್ಸನ್, ಕಾರ್ಕಳದ ಸಂದೀಶ್ ಹಾಗೂ ಆತ್ರಾಡಿಯ ರಮೇಶ್ ನಾಯ್ಕ್ ಅವರಿಗೆ ಗಾಲಿಕುರ್ಚಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ನಿವೃತ್ತ ಮಹಿಳಾ ಆರೋಗ್ಯ ಸಂದರ್ಶಕರು ಹಾಗೂ ಸೇವಾಭಾರತಿ POSH ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಸಂತಿ ಗೌಡ ಉದ್ಘಾಟಿಸಿ ದಿವ್ಯಾಂಗರಿಗೆ ಶುಭಹಾರೈಸಿದರು. ದಿವ್ಯಾಂಗರ ಜೀವನದಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಅತ್ಯಂತ ಮುಖ್ಯವಾಗಿದ್ದು, ಸಮಾಜದ ಸಹಕಾರದಿಂದ ಅವರ ಜೀವನ ಮತ್ತಷ್ಟು ಸುಧಾರಿಸಬಹುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಹ ಪ್ರಚಾರ ಪ್ರಮುಖರಾದ ಗಣೇಶ್ ಕೊಕ್ಕಡ, ಕೊಕ್ಕಡದ ಮಾಳವಿಕ, ಸೇವಾಭಾರತಿ ಅಧ್ಯಕ್ಷರಾದ ವಿನಾಯಕ ರಾವ್ ಹಾಗೂ ಟ್ರಸ್ಟಿ ಸ್ವರ್ಣಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.