ಪುತ್ತೂರು ನವೆಂಬರ್ 14: ಪುತ್ತೂರು ಇದೀಗ ಸ್ವರ್ಣೋದ್ಯಮಿಗಳ ಹಾಟ್ ಸ್ಪಾಟ್ ಆಗಿ ಪರಿವರ್ತನೆಗೊಳ್ಳುತ್ತಿದ್ದು, ಸ್ವರ್ಣೋದ್ಯಮಿಗಳು ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಇತ್ತೀಚೆಗೆ ಹೆಲಿಕಾಪ್ಟರ್ ಒಂದು ಪುತ್ತೂರಿನ ಮೊಟ್ಟೆತ್ತಡ್ಕ ಎಂಬಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೆಲಿಪ್ಯಾಡ್ ಗೆ ಬಂದು ಇಳಿದಿದ್ದು, ಮಾಹಿತಿ ಪ್ರಕಾರ ಸ್ವರ್ಣೋದ್ಯಮಿಯೊಬ್ಬರು ಅದರಲ್ಲಿ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಪುತ್ತೂರಿನಲ್ಲಿ ಹೆಲಿಕಾಪ್ಟರ್ ಗಳ ಹಾರಾಟ ಕಡಿಮೆ, ಪ್ರಮುಖ ರಾಜಕಾರಣಿ ಅಥವಾ ಮಂತ್ರಿಗಳು ಪುತ್ತೂರಿಗೆ ಆಗಮಿಸುತ್ತಿದ್ದರು, ಮಂಗಳೂರಿಗೆ ಬಂದು ಅಲ್ಲಿಂದ ಕಾರಿನಲ್ಲಿ ಆಗಮಿಸುತ್ತಿದ್ದರು, ಬಹುತೇಕ ಪುತ್ತೂರಿನ ನಗರಕ್ಕೆ ಹೆಲಿಕಾಪ್ಟರ್ ಬಂದಿದ್ದೇ ಇಲ್ಲ. ಹೆಲಿಕಾಪ್ಟರ್ ಒಂದು ಕಾಲದಲ್ಲಿ ಪುತ್ತೂರಿನ ಹಳ್ಳಿ-ಹಳ್ಳಿಗಳಲ್ಲಿ ಹಾರಾಡಿದ್ದನ್ನು ಈ ಭಾಗದ ಜನ ಇನ್ನೂ ಮರೆತಿಲ್ಲ. ಆ ಸಮಯದಲ್ಲಿ ಹೆಲಿಕಾಪ್ಟರ್ ಮೂಲಕ ಗೇರು ಪ್ಲಾಂಟೇಷನ್ ಗಳಿಗೆ ಕೀಟನಾಶಕವನ್ನು ಬಿಡಲಾಗಿತ್ತು. ಆ ಸಮಯದಲ್ಲಿ ತಿಂಗಳುಗಟ್ಟಲೆ ಪುತ್ತೂರಿನ ತುಂಬಾ ಹೆಲಿಕಾಪ್ಟರ್ ಗಳು ಹಾರಾಡಿದ್ದವು.

ಆದರೆ ನವಂಬರ್ 13 ರಂದು ಹೆಲಿಕಾಪ್ಟರ್ ಒಂದು ಪುತ್ತೂರು ನಗರದ ಮೊಟ್ಟೆತ್ತಡ್ಕ ಎಂಬಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿದಿತ್ತು. ಭಾರೀ ಪ್ರಮಾಣದ ಧೂಳೆಬ್ಬಿಸಿ ಇಳಿದ ಹೆಲಿಕಾಪ್ಟರ್ ಅನ್ನು ನೋಡಲು ಸುತ್ತಮುತ್ತಲಿನ ಜನರೂ ನೆರೆದಿದ್ದರು. ಮಾಹಿತಿಯ ಪ್ರಕಾರ ಭೀಮಾ ಜ್ಯುವೆಲ್ಲರ್ಸ್ ನ ಎಮ್.ಡಿ ವಿಷ್ಣು ಶರ್ಮ ಭಟ್ ಮತ್ತು ಮ್ಯಾನೇಜರ್ ವಿರೇಂದ್ರ ವೆಂಕಟೇಶ್ ಪುತ್ತೂರು ಮೊಟ್ಟೆತ್ತಡ್ಕದ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ನಿಲ್ಲಿಸಿ ಬಳಿಕ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಪುತ್ತೂರಿನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಉತ್ತಮ ಬೇಡಿಕೆಯಿದೆ ಎಂದು ತಿಳಿದಿರುವ ಹಲವಾರು ಜ್ಯುವೆಲ್ಲರಿ ಕಂಪನಿಗಳು ಪುತ್ತೂರಿನಲ್ಲಿ ಈಗಾಗಲೇ ತೆರೆದಿದ್ದು, ಮತ್ತಷ್ಟು ಜ್ಯುವೆಲ್ಲರಿ ಕಂಪನಿಗಳು ಪುತ್ತೂರಿಗೆ ಆಗಮಿಸಲು ಹಾತೊರೆದು ನಿಂತಿದೆ ಅನ್ನೋದಕ್ಕೆ ಈ ಹೆಲಿಕಾಪ್ಟರ್ ಆಗಮನ ಕೂಡಾ ಸಾಕ್ಷಿಯಾಗಿದೆ.