Connect with us

KARNATAKA

ಭಾರೀ ಗಾಳಿ ಮಳೆಗೆ ಲಂಗರು ಕಡಿದು ದಡಕ್ಕೆ ಬಂದ ಮೀನುಗಾರಿಕಾ ದೋಣಿಗಳು

ಕಾರವಾರ ಸೆಪ್ಟೆಂಬರ್ 21: ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಗಾಳಿಗೆ ಮೀನುಗಾರರು ತತ್ತರಿಸಿ ಹೋಗಿದ್ದಾರೆ. ಕಾರವಾರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆ ಮಲ್ಪೆಯ ‘ಪ್ರಾವಿಡೆನ್ಸ್’ ಹೆಸರಿನ ಯಾಂತ್ರೀಕೃತ ದೋಣಿ ಮತ್ತು ಪಾತಿ ದೋಣಿಯೊಂದು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಬಂದಿವೆ.


ಮಲ್ಪೆಯ ದೋಣಿಯು ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಸಮುದ್ರ ಮತ್ತಷ್ಟು ಪ್ರಕ್ಷುಬ್ಧವಾಯಿತು. ಹಾಗಾಗಿ ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿನ ಬಳಿ ಲಂಗರು ಹಾಕಲಾಗಿತ್ತು. ಗಾಳಿಯ ರಭಸಕ್ಕೆ ಲಂಗರು ಕಡಿದು ದಡಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಪಾತಿ ದೋಣಿಯು ದಡ ಮೇಲೆ ಬಂದು ಬಿದ್ದಿದ್ದು, ಸ್ವಲ್ಪ ಹಾನಿಯಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.


ಅಲೆಗಳ ಅಬ್ಬರಕ್ಕೆ ಸಿಲುಕಿದ ಮಲ್ಪೆಯ ‘ಭ್ರಾಮರಿ’ ಹೆಸರಿನ ದೋಣಿಯು ಕಾರವಾರ ಸಮೀಪ ಭಾನುವಾರ ಮುಳುಗಿದೆ. ಮಲ್ಪೆಯ ಜಾಹ್ನವಿ ಕೋಟ್ಯಾನ್ ಎಂಬುವವರಿಗೆ ಈ ದೋಣಿ ಸೇರಿದೆ. ಅದರಲ್ಲಿದ್ದ ಭಟ್ಕಳ ಮತ್ತು ಉಡುಪಿಯ ಏಳು ಮಂದಿ ಮೀನುಗಾರರು ಸಮೀಪದಲ್ಲಿದ್ದ ಮೀನುಗಾರಿಕಾ ದೋಣಿಗಳನ್ನು ಏರಿ ದಡ ಸೇರಿದರು. ಜಿಲ್ಲೆಯ ಕರಾವಳಿಯಲ್ಲಿ ಭಾನುವಾರ ರಾತ್ರಿ ಅಬ್ಬರಿಸಿದ್ದ ಮಳೆ, ಸೋಮವಾರ ಬೆಳಿಗ್ಗೆ ಕೆಲಕಾಲ ಬಿಡುವು ನೀಡಿತ್ತು. ಆದರೆ, ನಂತರ ಆಗಾಗ ಜೋರಾದ ಗಾಳಿಯೊಂದಿಗೆ ಮುಂದುವರಿದಿದೆ.

Facebook Comments

comments