ಪುತ್ತೂರು ಮಾರ್ಚ್ 16: ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಪುತ್ತೂರಿನಾದ್ಯಂತ ಇಂದು ಸಂಜೆ ಗುಡುಗು ಸಹಿತ ಭಾರೀ ಮಳೆ ಮತ್ತು ಗಾಳಿ ಬೀಸಿದೆ.

ಸಂಜೆ ವೇಳೆಗೆ ಏಕಾಏಕಿ ಗುಡುಗು ಸಹಿತ ಮಳೆ ಆರಂಭವಾದ ಕಾರಣ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವಾಹನ ಸವಾರರು ಮತ್ತು ಪಾದಚಾರಿಗಳು ಮಳೆಯಲ್ಲೇ ನೆನೆಯುತ್ತಾ ಸಾಗಬೇಕಾಯಿತು.

ಅಡಿಕೆ ಒಣಗಿಸಲು ಹಾಕಿದ್ದ ಕೃಷಿಕರಿಗೆ ಈ ಮಳೆ ಸಂಕಷ್ಟ ತಂದೊಡ್ಡಿದೆ. ಒಮ್ಮೆಲೇ ಮಳೆ ಸುರಿದಿದ್ದರಿಂದ ಅಡಿಕೆಯನ್ನು ರಕ್ಷಿಸಲು ಸಾಧ್ಯವಾಗದೆ ಹಲವು ಕಡೆಗಳಲ್ಲಿ ಅಡಿಕೆ ಮಳೆ ನೀರಿನಲ್ಲಿ ತೊಯ್ದು ಹೋಗಿದೆ.
ಭಾರೀ ಗುಡುಗು ಮತ್ತು ಬಿರುಗಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ತಾಂತ್ರಿಕ ದೋಷದಿಂದಾಗಿ ಪುತ್ತೂರು ನಗರದಾದ್ಯಂತ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು..