ಮಂಗಳೂರು/ಉಡುಪಿ ಮಾರ್ಚ್ 28 : ಕಳೆದ ಒಂದು ತಿಂಗಳಿನಿಂದ ದಾಖಲೆ ಮಟ್ಟದ ತಾಪಮಾನಕ್ಕೆ ಸಾಕ್ಷಿಯಾಗಿದ್ದ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಸಂಜೆ ವರುಣನ ಸಿಂಚನವಾಗಿದ್ದು, ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ಅಲ್ಪ ಸಮಾಧಾನ ನೀಡಿದೆ.

ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟುವ ಮೂಲಕ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿತ್ತು. ಶನಿವಾರ ಸಂಜೆ ದಿಢೀರನೆ ಆಕಾಶ ಮೋಡಕವಿದು, ಗುಡುಗು ಮಿಂಚಿನ ಸಹಿತ ತುಂತುರು ಮಳೆ ಸುರಿಯಿತು. ಇದರಿಂದಾಗಿ ರಾತ್ರಿ ವೇಳೆಗೆ ವಾತಾವರಣದಲ್ಲಿ ತುಸು ತಂಪು ಮನೆ ಮಾಡಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಾದ ಬೆಳ್ತಂಗಡಿ ಹಾಗೂ ಬಂಟ್ವಾಳದಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ಇದೀಗ ನಗರ ಪ್ರದೇಶಕ್ಕೂ ಮಳೆಯ ಸ್ಪರ್ಶವಾಗಿದೆ.

ಉಡುಪಿಯಲ್ಲಿ ಬಿರುಸಿನ ಮಳೆ:
ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಜಿಲ್ಲೆಯ ಕಾಪು, ಶಿರ್ವ, ಪಡುಬಿದ್ರಿ ಹಾಗೂ ಕಟಪಾಡಿ ಪರಿಸರದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಮಳೆಯ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಗುಡುಗು ಮತ್ತು ಸಿಡಿಲಿನ ಅಬ್ಬರ ಜೋರಾಗಿದ್ದ ಕಾರಣ ಕೆಲ ಕಾಲ ಜನಜೀವನ ಸ್ಥಗಿತಗೊಂಡಿತ್ತು.
ಬಿಸಿಲಿನಿಂದ ಮುಕ್ತಿ:
ಕಳೆದ ವಾರದಿಂದ ಕರಾವಳಿಯುದ್ದಕ್ಕೂ ತೀವ್ರ ಹೈರಾಣಾಗಿಸಿದ್ದ ಬಿಸಿಲಿನ ಝಳಕ್ಕೆ ಈ ಮಳೆ ಬ್ರೇಕ್ ಹಾಕಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರೈತಾಪಿ ವರ್ಗದಲ್ಲಿ ಈ ಮಳೆ ಹೊಸ ಭರವಸೆ ಮೂಡಿಸಿದೆ. ಮುಂದಿನ ಎರಡು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.