ಚಿಕ್ಕಮಗಳೂರು, ಮಾರ್ಚ್ 15: ಕೊಡಗು, ಚಿಕ್ಕಮಗಳೂರು ಸೇರಿ ಬೆಳಗಾವಿಯಲ್ಲಿಯೂ ಉತ್ತಮ ಮಳೆಯಾಗಿದ್ದು, ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿರುವ ಪ್ರಸಂಗವೂ ನಡೆದಿದೆ. ಬೆಳಗಾವಿಯಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಸದಾಶಿವ ನಗರ, ನೆಹರು ನಗರ, ಶಾಹು ನಗರದಲ್ಲಿ ವರುಣ ಅಬ್ಬರಿಸಿದ್ದಾನೆ. ಕೊಡಗಿನ ಹಲವೆಡೆಯೂ ಧಾರಾಕಾರ ಮಳೆಯಾಗಿದ್ದು, ಸುಡು ಬಿಸಿಲಿನ ಸಂದರ್ಭ ಸುರಿದ ಮಳೆಕಾಫಿ ಬೆಳೆಗಾರರಲ್ಲಿ ಹರ್ಷ ತಂದಿದೆ.
ಮಲೆನಾಡು ಭಾಗದಲ್ಲಿ ಭಾನುವಾರ ಸುರಿದ ಭಾರೀ ಗಾಳಿ ಸಹಿತ ಮಳೆಯ ಪರಿಣಾಮ ಚಿಕ್ಕಮಗಳೂರು–ಶೃಂಗೇರಿ ಹೆದ್ದಾರಿಯಲ್ಲಿ ಬೃಹತ್ ಮರ ರಸ್ತೆ ಮಧ್ಯೆ ಧರೆಗುರುಳಿದ ಘಟನೆ ನಡೆದಿದೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ಸುಮಾರು 4 ರಿಂದ 5 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಕಂಡುಬಂದಿತು.

ಶೃಂಗೇರಿ, ಕಳಸ, ಎನ್.ಆರ್.ಪುರ, ಮುತ್ತೋಡಿ, ಹೊರನಾಡು, ಕುದುರೆಮುಖ ಹಾಗೂ ಹಿರೇಬೈಲ್ ಭಾಗಗಳಲ್ಲಿ ಕಳೆದ ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿದಿದೆ. ಈ ಮಳೆಯಿಂದಾಗಿ ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನರಿಗೆ ತಂಪು ದೊರೆತಿದೆ.ವಿಶೇಷವಾಗಿ ಕಾಫಿ ಮತ್ತು ಅಡಿಕೆ ಬೆಳೆಗಾರರಲ್ಲಿ ಈ ಮಳೆ ಹೊಸ ಆಶಾಭಾವನೆ ಮೂಡಿಸಿದೆ. ತೋಟಗಳಿಗೆ ನೀರಾಯಿಸಲು ಪರದಾಡುತ್ತಿದ್ದ ಬೆಳೆಗಾರರು ಇದೀಗ ಸಂತಸ ವ್ಯಕ್ತಪಡಿಸಿದ್ದಾರೆ.