Connect with us

    DAKSHINA KANNADA

    ಎರಡು ಎಳೆ ಜೀವಗಳನ್ನು ಬಲಿ ಪಡೆದ ಭಾರೀ ಮಳೆ, ಕೊಲ್ಲಮೊಗು,ಬಾಳುಗೋಡಿನಲ್ಲಿ ಭಾರೀ ನಷ್ಟ…..

    ಸುಬ್ರಮಣ್ಯ, ಆಗಸ್ಟ್ 02: ಕರಾವಳಿ ಭಾಗದಲ್ಲಿ ಸುರಿದ ಭಾರೀ ಮಳೆಗೆ ಎರಡು ಎಳೆ ಜೀವಗಳು ಅಸು ನೀಗಿವೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಈ ಘಟನೆ ನಡೆದಿದೆ.

    ಸೋಮವಾರ ಸಂಜೆ ಸುರಿದ ಮಹಾ ಮಳೆಗೆ ಸುಬ್ರಹ್ಮಣ್ಯ, ಕೊಲ್ಲಮೊಗರು,ಕಲ್ಮಕಾರು,ಬಾಳುಗೋಡು ಭಾಗದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಮಳೆಯ ಕಾರಣದಿಂದಾಗಿ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದು, ಪರ್ವತಮುಖಿ ನಿವಾಸಿ ಕುಶಾಲಪ್ಪ ಎನ್ನುವವರ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಧಾರುಣ ಸಾವು ಕಂಡಿದ್ದಾರೆ. ಶ್ರುತಿ (11) ಮತ್ತು ಗಾನ (6) ಸಾವಿಗೀಡಾದ ಮಕ್ಕಳಾಗಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಅಗ್ನಿಶಾಮಕದಳ ಹಾಗು ಸ್ಥಳೀಯರು ಮಣ್ಣಿನಡಿಗೆ ಸಿಲುಕಿದ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದ್ದು, ಕೊನೆಗೂ ಮಕ್ಕಳನ್ನು ಮಣ್ಣಿನಡಿಯಿಂದ ಹೊರ ತೆಗೆದಿದ್ದಾರೆ. ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡಿದ್ದಾರೆ. ಘಟನೆಯಿಂದಾಗಿ ಮನೆ ಸಂಪೂರ್ಣ ನಾಶವಾಗಿದ್ದು, ಕುಸುಮಾಧರ ಕುಟುಂಬ ಬೀದಿಗೆ ಬೀಳುವಂತಾಗಿದೆ.

    ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ದರ್ಪಣತೀರ್ಥ ನದಿ ಮೈ ತುಂಬಿ ಹರಿದಿದ್ದು,ನದಿ ದಡದಲ್ಲಿರುವ ಆದಿ ಸುಬ್ರಹ್ಮಣ್ಯ ದೇವಳದ ಒಳಗೆ ನೀರು ನುಗ್ಗಿದೆ..ಅನೇಕ ವರ್ಷಗಳ ನಂತರ ಆದಿ ದೇವಳದ ಒಳಗೆ ದರ್ಪಣ ತೀರ್ಥವು ಪ್ರವೇಶಿಸಿದ್ದು,ಶ್ರೀ ದೇವಳದ ಒಳಾಂಗಣ, ಹೊರಾಂಗಣವು ಸಂಪೂರ್ಣವಾಗಿ ಜಲಾವೃತ್ತಗೊಂಡಿದೆ. ಮಳೆಯ ಹಿನ್ನಲೆ ಯಲ್ಲಿ ಭಕ್ತರು ಮುಂದಿನ ಎರಡು ದಿನ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬರದಂತೇ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಭಕ್ತರಿಗೆ ಮನವಿ ಮಾಡಿದ್ದಾರೆ.

    ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ರುದ್ರಪಾದ ಸೇತುವೆಯು ಜಲಾವೃತಗೊಂಡಿದೆ.ಅಲ್ಲದೆ ದರ್ಪಣ ತೀರ್ಥದಲ್ಲಿನ ಪ್ರವಾಹದಿಂದ ಸುಬ್ರಹ್ಮಣ್ಯ-ಪುತ್ತೂರು- ಮಂಜೇಶ್ವರ ಅಂತರ್ ರಾಜ್ಯ ಸಂಪರ್ಕ ರಸ್ತೆಯ ಸೇತುವೆಯೂ ಮುಳುಗಡೆಯಾಗಿದೆ..ಕುಕ್ಕೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ತುಂಬಿ ಹರಿಯುತ್ತಿರುವ ದರ್ಪಣ ತೀರ್ಥದಿಂದ ನದಿ ತಟದಲ್ಲಿನ ಸುಮಾರು 12 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.ನದಿ ತಟದ ಮನೆಯವರು ದರ್ಪಣ ತೀರ್ಥ ಗಂಗಾಮಾತೆಗೆ ತನ್ನ ರುದ್ರಪ್ರವಾಹವನ್ನು ಕಡಿಮೆ ಮಾಡುವಂತೆ ಪ್ರಾರ್ಥಿಸಿ ಭಾಗಿನ ಸಮರ್ಪಣೆ ಮಾಡಿದ್ದಾರೆ..

    ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಹರಿಹರ ಬಾಳುಗೋಡು, ಕೊಲ್ಲಮೊಗ್ರು ಕಲ್ಮಕಾರು,ಬಾಳುಗೋಡು ಐನಕಿದು ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು, ಜಲಪ್ರಳಯವೇ ಸಂಭವಿಸಿದೆ.ಮಳೆಯ ಭೀಕರತೆಗೆ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಈ ನಾಲ್ಕು ಗ್ರಾಮಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.

    ನಡುಗಲ್ಲು ಮೂಲಕ ಈ ನಾಲ್ಕು ಗ್ರಾಮಗಳ ತಲುಪುವ ನಡುಗಲ್ಲು ಹರಿಹರ ಮಾರ್ಗದ ಮಲ್ಲಾರ ಬಳಿ ದೊಡ್ಡ ಶಂಖ ಎಂಬಲ್ಲಿ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.ಇದೇ ಮಾರ್ಗದ ಮುಳುಗಡೆಗೊಂಡ ಸೇತುವೆ ಮೇಲೆ ಬೈಕ್ ನಲ್ಲಿ ತೆರಳುತಿದ್ದ ಕೊಲ್ಲಮೊಗ್ರು ಗ್ರಾಮದ ಸವಾರನ ಬೈಕ್ ನೀರು ಪಾಲಾಗಿದೆ. ಸವಾರ ಪ್ರಾಣಾಪಾಯದಿಂಧ ಪಾರಾಗಿದ್ದಾರೆ..

    ಕಲ್ಮಕಾರು ಭಾಗದಿಂದ ಕೊಲ್ಲಮೊಗ್ರು ಹರಿಹರ ಮೂಲಕ ಹರಿಯುವ ನದಿ ತುಂಬಿ ಹರಿಯುತಿದ್ದು ಹರಿಹರ ಮುಖ್ಯ ಪೇಟೆ ಬಾಗಶ; ಮುಳುಗಡೆಗೊಂಡಿದೆ.ಹರಿಹರದಿಂದ ಕೊಲ್ಲಮೊಗ್ರು, ಕಲ್ಮಕಾರು ಭಾಗಕ್ಕೆ ಸಂಚರಿಸುವ ರಸ್ತೆ ಹರಿಹರ ಪೇಟೆಯಿಂದ ಮುಂದಕ್ಕೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.ಬಾಳುಗೋಡಿಗು ಸಂಪರ್ಕ ಕಡಿತವಾಗಿದೆ.. ಸುಬ್ರಹ್ಮಣ್ಯ ಮಳೆಯಾಳ ಮಾರ್ಗವಾಗಿ ಹರಿಹರ ಈ ಭಾಗದ ಗುಂಡಡ್ಕ ಸೇತುವೆ ಮುಳುಗಡೆಗೊಂಡಿದೆ. ಪಲ್ಲತ್ತಡ್ಕ ಎಂಬಲ್ಲಿ ನದಿ ದಂಡೆ ಮೇಲಿನ ಎರಡು ಮನೆಗಳು ಸಂಪೂರ್ಣ ಜಲಾವೃತವಾಗಿದೆ..

    ಇತಿಹಾಸದಲ್ಲಿ ಈ ಪ್ರಮಾಣದಲ್ಲಿ ಇದೆ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಮಳೆಯಾಗಿದ್ದು, ದೊಡ್ಡ ಪ್ರಮಾಣದ ನೆರೆ ಉಕ್ಕಿ ಹರಿದಿದೆ. ಪುರಾತನ ಶ್ರೀ ಹರಿಹರೇಶ್ವರ ದೆಗುಲದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕೂಜುಗೋಡು ನೇತೃತ್ವದಲ್ಲಿ ಪ್ರದಾನ ಅರ್ಚಕ ಸುಬ್ರಹ್ಮಣ್ಯ ಭಟ್ ದೇಗುಲದಲ್ಲಿ ರಾತ್ರಿ ಪೂಜೆ ವೇಳೆ ವಿಶೇಷ ಪ್ರಾರ್ಥನೆ ಮಾಡಿ ಶಾಂತಿ ಹಾಗೂ ಹೆಚ್ಚಿನ ಪ್ರಾಕ್ರತಿಕ ವಿಕೋಪ ಸಂಭವಿಸದೆ ಪ್ರಾರ್ಥನೆ ಮಾಡಲಾಗಿದೆ..

    ಮಳೆಯಿಂದಾಗಿ ಕಲ್ಲುಗುಂಡಿ ಪೇಟೆ ಸಂಪೂರ್ಣ ಜಲಾವೃತವಾಗಿದ್ದು, ಪೇಟೆಯ ಅಂಗಡಿ ಒಳಗೆಲ್ಲಾ ನೀರು ನುಗ್ಗಿ ಅಂಗಡಿ ವಸ್ತುಗಳೆಲ್ಲಾ ನೀರಲ್ಲಿ ತೇಲಾಡಿದೆ. ಪಯಸ್ವಿನಿ ನದಿ ರಸ್ತೆಯಲ್ಲಿ ಹರಿದ ಹಿನ್ನಲೆಯಲ್ಲಿ ಮಂಗಳೂರು- ಮೈಸೂರು ರಸ್ತೆ ಮುಂಜಾನೆ 4 ಗಂಟೆವರೆಗೆ ಬಂದ್ ಆಗಿದೆ.

    ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.ಈ ಭಾಗದಲ್ಲಿ ಮುಂಜಾಗ್ರತ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಪ್ ತಂಡವನ್ನು ಆ ಭಾಗಕ್ಕೆ ಈಗಾಗಲೇ ಕಳುಹಿಸಿಕೊಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ ಗಮನಹರಿಸಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply