LATEST NEWS
ಕರಾವಳಿ ಉರಿ ಬಿಸಿಲಿಗೆ ಹೈರಾಣಾದ ಮೀನುಗಾರರು ಕುದಿಯುತ್ತಿರುವ ಅರಬ್ಬೀ ಸಮುದ್ರದಿಂದ ಕಾಪಾಡು ಎಂದು ದೈವದ ಮೊರೆ ಹೋದ ಕಡಲ ಮಕ್ಕಳು
ಕರಾವಳಿ ಉರಿ ಬಿಸಿಲಿಗೆ ಹೈರಾಣಾದ ಮೀನುಗಾರರು ಕುದಿಯುತ್ತಿರುವ ಅರಬ್ಬೀ ಸಮುದ್ರದಿಂದ ಕಾಪಾಡು ಎಂದು ದೈವದ ಮೊರೆ ಹೋದ ಕಡಲ ಮಕ್ಕಳು
ಉಡುಪಿ ಅಕ್ಟೋಬರ್ 10: ಕರಾವಳಿಯಲ್ಲಿ ಮಳೆಗಾಲ ಈಗಷ್ಟೇ ಮುಗಿದಿದೆ. ಮಳೆಗಾಲದ ಮೀನಗಾರಿಕಾ ಋತು ಮುಗಿದು ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಕರಾವಳಿಯಲ್ಲಿ ಸುರಿದ ಭಾರಿ ಮಳೆ, ವಾಯುಭಾರ ಕುಸಿತ ಮೀನುಗಾರಿಕೆಗೆ ತೆರಳದಂತೆ ಮಾಡಿತ್ತು, ಈಗ ಮಳೆಗಾಲ ಮುಗಿದಿದೆ ಇನ್ನೇನು ಮೀನು ಸಿಗುತ್ತೆ ಎಂಬ ಆಶಾ ಭಾವನೆಯಲ್ಲಿದ್ದ ಮೀನುಗಾರರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕರಾವಳಿಯ ಉರಿ ಬಿಸಿಲು ಮೀನುಗಾರರಿಗೆ ಶಾಪವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಕುದಿಯುತ್ತಿರುವ ಅರಬ್ಬೀ ಸಮುದ್ರದಿಂದ ಕಾಪಾಡು ಎಂದು ಕಡಲ ಮಕ್ಕಳು ದೈವದ ಮೊರೆ ಹೋಗಿದ್ದಾರೆ.
ಅನಿರೀಕ್ಷಿತವಾದ ಹವಮಾನ ಬದಲಾವಣೆಯಿಂದ ಮನುಷ್ಯ ತತ್ತರಿಸಿ ಹೋಗುತ್ತಿದ್ದಾನೆ. ಭೂಮಿಯ ಉಷ್ಣತೆ ಹೆಚ್ಚಿರೋದು ಮಾತ್ರವಲ್ಲ, ಸಮುದ್ರ ಕೂಡಾ ಕಾದು ಕೆಂಡದಂತಾಗಿದೆ. ಮಳೆಗಾಲ ಮುಗಿದ ನಂತರ ಕರಾವಳಿಯಲ್ಲಿ ಸ್ವಲ್ಪಮಟ್ಟಿಗೆ ತಂಪಾದ ವಾತಾವರಣ ಸರ್ವೆ ಸಾಮಾನ್ಯ ಆದರೆ ಈ ಬಾರಿ ಕರಾವಳಿ ಜಿಲ್ಲೆಗಳಲ್ಲಿನ ಉರಿ ಬಿಸಿಲು ಬೇಸಿಗೆಯ ನೆನಪು ತರಿಸುತ್ತಿದೆ.
ಉರಿ ಬಿಸಿಲಿಗೆ ಕಡಲು ಕುದಿಯುತ್ತಿರೋದ್ರಿಂದ ಮೊಗವೀರರು ಕಸುಬು ಕಳೆದುಕೊಂಡು ದೈವ ಬೊಬ್ಬರ್ಯನ ಮೊರೆ ಹೋಗುವಂತಾಗಿದೆ. ಮತ್ಸ್ಯ ಸಂಪತ್ತನ್ನೇ ನಂಬಿರುವ ಮೀನುಗಾರರಿಗೆ ಇದರಿಂದ ಕಸುಬೇ ಇಲ್ಲದಂತಾಗಿದೆ. ಬೆಳಗ್ಗೆಯಿಂದ ಸಂಜೆಯ ತನಕ ಸಮುದ್ರಕ್ಕೆ ಬಲೆ ಬೀಸಿದರೂ ನಿರೀಕ್ಷಿತ ಮೀನು ಸಿಗುತ್ತಿಲ್ಲ. ನೀರು ತಂಪಾಗುತ್ತಿಲ್ಲ, ಮೀನು ತಟಕ್ಕೋ, ನೀರಿನ ಮೇಲ್ಮೈಗೋ ಬರುತ್ತಲೇ ಇಲ್ಲ. ಕಳೆದ 40 ವರ್ಷಗಳಲ್ಲೆ ಮೊದಲ ಬಾರಿಗೆ ಈ ತರದ ಹವಾಮಾನ ವೈಪರಿತ್ಯವಾಗಿದೆ ಎನ್ನುತ್ತಾರೆ ಮೀನುಗಾರರು.
ಮೀನಿನ ಬುಗ್ಗೆಗಳು ತಳ ಬಿಟ್ಟು ಮೇಲಕ್ಕೆ ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೀನುಗಾರಿಕೆಗೆ ಹೋದರೂ ಏನೂ ಗಿಟ್ಟುತ್ತಿಲ್ಲ ಎಂದರು. ನಾವು ದೈವ ದೇವರನ್ನು ನಂಬಿ, ಪ್ರಾಣದ ಹಂಗು ತೊರೆದು ಕಡಲಿಗೆ ಇಳಿಯುತ್ತೇವೆ. ಇದೀಗ ಮತ್ಸ್ಯಕ್ಷಾಮ ಬಂದಿದೆ. ಕಡಲರಾಜ ಬೊಬ್ಬರ್ಯನೇ ನಮ್ಮ ಕೈಹಿಡಿಬೇಕೆಂದು ದರ್ಶನ ಸೇವೆ ಕೊಟ್ಟಿದ್ದೇವೆ. ನಮ್ಮ ಭಾರವನ್ನು ದೇವರ ಮೇಲೆ ಹಾಕಿದ್ದೇವೆ ಎನ್ನುತ್ತಾರೆ ಮೀನುಗಾರರು.
You must be logged in to post a comment Login