Connect with us

LATEST NEWS

ಯುಟ್ಯೂಬ್ ನೋಡಿ ಬಾಂಬ್ ತಯಾರಿಸಿದ್ದ ಬಾಂಬರ್ ಆದಿತ್ಯ ರಾವ್ – ಪೊಲೀಸ್ ಆಯುಕ್ತ ಹರ್ಷ

ಯುಟ್ಯೂಬ್ ನೋಡಿ ಬಾಂಬ್ ತಯಾರಿಸಿದ್ದ ಬಾಂಬರ್ ಆದಿತ್ಯ ರಾವ್ – ಪೊಲೀಸ್ ಆಯುಕ್ತ ಹರ್ಷ

ಮಂಗಳೂರು ಜನವರಿ 23: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದ ಬಾಂಬರ್ ಆದಿತ್ಯರಾವ್ ಬಗ್ಗೆ ಸ್ಪೋಟಕ ಮಾಹಿತಿಯನ್ನು ಮಂಗಳೂರು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದು, ಸಾಮಾಜಿಕ ಜಾಲತಾಣ ಯುಟ್ಯೂಬ್ ನೋಡಿ ಬಾಂಬ್ ತಯಾರಿಕೆಯನ್ನು ಕಲಿತಿದ್ದ ಎಂದು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಹರ್ಷ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಆದಿತ್ಯ ರಾವ್ ವಿರುದ್ದ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದ್ದು, ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟು‌ಮಾಡಲು‌ ಯತ್ನಿಸಿದ್ದಾನೆ ಎಂದು ತಿಳಿಸಿದರು.

ಬಿಇ ಪದವೀಧರನಾಗಿದ್ದು, ತನ್ನ ತಾಂತ್ರಿಕ ಜ್ಞಾನವನ್ನು ಬಳಸಿ, ಇಂಟರ್ ನೆಟ್ ಸಹಾಯದಿಂದ ಸ್ಫೋಟಕ ತಯಾರಿಸಿದ್ದಾನೆ. ಬ್ರಿಲಿಯಂಟ್‌ ಆಗಿರುವ ಆದಿತ್ಯ ಸ್ಪೋಟಕ, ಬಾಂಬ್ ತಯಾರಿ ಬಗ್ಗೆ ವಿವರ ತಿಳ್ಕೊಂಡಿದ್ದಾನೆ. ತಿಂಗಳಾನುಗಟ್ಟಲೆ ಬಾಂಬ್ ಬಗ್ಗೆ ಅಧ್ಯಯನ ನಡೆಸಿದ್ದ ಆರೋಪಿ ಟ್ಯುಟೋರಿಯಲ್ ತರದಷ್ಟು ಮಾಹಿತಿಯನ್ನು ಪೊಲೀಸರಿಗೆ ಕೊಟ್ಟಿದ್ದಾನೆ. ಸುಧಾರಿತ ಸ್ಪೋಟಕ ತಯಾರು ಮಾಡಲು ಎಲ್ಲ ರಾಸಾಯನಿಕಗಳನ್ನು ತರಿಸಿಕೊಂಡು ಬಾಂಬ್ ತಯಾರಿ ಮಾಡಿದ್ದ ಎಂದು ತಿಳಿಸಿದರು.

ಮಂಗಳೂರಿನ ಹೊಟೇಲಿನಲ್ಲಿ ಕೆಲಸಕ್ಕಿದ್ದು ರಜೆಯಲ್ಲಿ ಬಾಂಬ್ ತಯಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ, ಕಾರ್ಕಳದ ಕಿಂಗ್ಸ್ ಕೋರ್ಟ್ ಹೊಟೇಲಿನಲ್ಲಿ ಕೊನೆಯ ಬಾರಿಗೆ ಕೆಲಸ ಮಾಡಿದ್ದ ಆದಿತ್ಯ ಅಲ್ಲಿಯೇ ಬಾಂಬ್ ಫೈನಲ್ ಟಚ್ ಮಾಡಿ ಮಂಗಳೂರಿಗೆ ತಂದಿದ್ದ ಎಂಬ ಸ್ಪೋಟಕ ಮಾಹಿತಿಯನ್ನು ಡಾ. ಹರ್ಷ ಅವರು ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿಟ್ಟಿದ್ದ ಸ್ಫೋಟಕದ ಪ್ರಮಾಣ ಎಂಥದ್ದು‌ ಎಂಬುದು ಎಫ್ಎಸ್ಎಲ್ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ. ಅಲ್ಲದೇ ಈ ಕೃತ್ಯದಲ್ಲಿ ಒಬ್ಬನೇ ಇರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು.