ಹಾಸನ ಸೆಪ್ಟೆಂಬರ್ 13: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಹರಿದು ಸಾವನಪ್ಪಿದವರ ಸಂಖ್ಯೆ 9ಕ್ಕೆ ಏರಿದೆ. ಅದರಲ್ಲೂ ವಿಧ್ಯಾರ್ಥಿಗಳು ಸೇರಿದ್ದು, ಘಟನೆಯಲ್ಲಿ ಸುಮಾರು 23ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಮೃತರಲ್ಲಿ ಐವರು ಹೊಸಹಳ್ಳಿ ಗ್ರಾಮದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಚಿಕ್ಕಮಗಳೂರು ಮಣೆನಹಳ್ಳಿ ಮರ್ಲೆ ಗ್ರಾಮದ ಸುರೇಶ (ಬಿಇ ವಿದ್ಯಾರ್ಥಿ), ಹೊಳೆನರಸೀಪುರ ತಾಲ್ಲೂಕಿನ ರಾಜೇಶ (17), ಕೆ.ಬಿ.ಪಾಳ್ಯ, ಡನಾಯಕನಹಳ್ಳಿ ಕೊಪ್ಪಲು ಗ್ರಾಮದ ಈಶ್ವರ (17), ಮುತ್ತಿಗೆಹೀರಳ್ಳಿ ಗ್ರಾಮದ ಗೋಕುಲ (17), ಕಬ್ಬಿನಹಳ್ಳಿ ಗ್ರಾಮದ ಕುಮಾರ (25), ಪ್ರವೀಣ (25), ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್ (23) ಹಾಸನ ತಾಲ್ಲೂಕು ಬಂಟರಹಳ್ಳಿ ಗ್ರಾಮದ ಪ್ರಭಾಕರ್ (55) ಬಳ್ಳಾರಿ ಮೂಲದ ಪ್ರವೀಣ್ ಕುಮಾರ್ (ಅಂತಿಮ ಬಿಇ ವಿದ್ಯಾರ್ಥಿ, ಚಿಕಿತ್ಸೆ ಫಲಕಾರಿಯಾಗದೇ ಸೆ. 13ರ ಬೆಳಗ್ಗೆ ನಿಧನರಾಗಿದ್ದಾರೆ.) ಎಂದು ಗುರುತಿಸಲಾಗಿದೆ.


ಹಾಸನದಿಂದ ಮೈಸೂರಿನ ಕಡೆಗೆ ಸಂಚರಿಸುತ್ತಿದ್ದ ಟ್ರಕ್ ವೊಂದು ಓವರ್‌ಟೇಕ್ ಮಾಡುವ ರಭಸದಲ್ಲಿ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಯಂತ್ರಣವನ್ನು ಕಳೆದುಕೊಂಡಿದೆ. ನಂತರ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಗುಂಪಿನ ಮೇಲೆ ನೇರವಾಗಿ ಹರಿದ ಪರಿಣಾಮ ದುರ್ಘಟನೆ ಸಂಭವಿಸಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ ಎಂದು ಹೇಳಿದ್ದಾರೆ.

Share Information