ಹರಿಯಾಣ ಚಿತ್ರರಂಗದ ಭರವಸೆಯ ನಟಿ, ಸಾಮಾಜಿಕ ಜಾಲತಾಣದ ಸಂಚಲನ ದಿವ್ಯಾಂಕಾ ಸಿರೋಹಿ (30) ಅವರು ವಿಧಿವಶರಾಗಿದ್ದಾರೆ. ಮಂಗಳವಾರ (ಏಪ್ರಿಲ್ 21) ತಡರಾತ್ರಿ ಸಂಭವಿಸಿದ ಹಠಾತ್ ಹೃದಯಾಘಾತ ಬಣ್ಣದ ಲೋಕದ ಪ್ರತಿಭಾವಂತ ನಟಿಯನ್ನು ಕಿತ್ತುಕೊಂಡಿದೆ.

ಮೂಲಗಳ ಪ್ರಕಾರ, ಗಾಜಿಯಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ತಡರಾತ್ರಿ ದಿವ್ಯಾಂಕಾ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಬುಧವಾರ (ಏಪ್ರಿಲ್ 22) ಬೆಳಿಗ್ಗೆ ಗಾಜಿಯಾಬಾದ್ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೂಲತಃ ಬುಲಂದ್ಶಹರ್ನವರಾದ ದಿವ್ಯಾಂಕಾ, ಶಿಕ್ಷಣದಲ್ಲಿ ಎಂ.ಬಿ.ಎ ಪದವಿ ಪಡೆದಿದ್ದರು. ಕಾರ್ಪೊರೇಟ್ ವೃತ್ತಿಗಿಂತ ನಟನೆ ಮತ್ತು ನೃತ್ಯದ ಮೇಲೆ ಅವರಿಗಿದ್ದ ಅಪಾರ ಆಸಕ್ತಿ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತ್ತು. ಆರಂಭದಲ್ಲಿ ಟಿಕ್ಟಾಕ್ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಅವರು, ತಮ್ಮ ವಿಶಿಷ್ಟ ಭಾವಾಭಿನಯದ ಮೂಲಕ ಗುರುತಿಸಿಕೊಂಡಿದ್ದರು. ಸುನಂದಾ ಶರ್ಮಾ ಅವರ ಹಾಡೊಂದಕ್ಕೆ ಅವರು ನೀಡಿದ್ದ ಎಕ್ಸ್ಪ್ರೆಶನ್ ವಿಡಿಯೋ 20 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡು ಇತಿಹಾಸ ನಿರ್ಮಿಸಿತ್ತು.
ಹರಿಯಾಣವಿ ಚಿತ್ರರಂಗದ ಹೆಸರಾಂತ ಕಲಾವಿದರಾದ ಮಾಸೂಮ್ ಶರ್ಮಾ, ಅಮಿತ್ ಸೈನಿ ರೋಹ್ಟಕಿಯಾ ಮತ್ತು ಕೆ.ಡಿ (KD) ಅವರೊಂದಿಗೆ ತೆರೆ ಹಂಚಿಕೊಂಡಿದ್ದ ದಿವ್ಯಾಂಕಾ, ಸುಮಾರು 50ಕ್ಕೂ ಹೆಚ್ಚು ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದರು. ಇನ್ಸ್ಟಾಗ್ರಾಮ್ನಲ್ಲಿ 1.3 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದ ಅವರು, ಪ್ರಾದೇಶಿಕ ಚಿತ್ರರಂಗದ ಪ್ರಭಾವಿ ವ್ಯಕ್ತಿತ್ವವಾಗಿ ಬೆಳೆದಿದ್ದರು.
ದಿವ್ಯಾಂಕಾ ಅವರ ಅಕಾಲಿಕ ನಿಧನಕ್ಕೆ ಹರಿಯಾಣವಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 30ನೇ ವಯಸ್ಸಿಗೆ ಪ್ರತಿಭಾವಂತ ನಟಿ ಮರೆಯಾಗಿರುವುದು ತುಂಬಲಾರದ ನಷ್ಟ ಎಂದು ಕಲಾವಿದರು ಕಂಬನಿ ಮಿಡಿದಿದ್ದಾರೆ.