ಬೆಂಗಳೂರು ಜನವರಿ 09: ಕಣ್ಣುನೋವೆಂದು ಕಾಲೇಜಿಗೆ ರಜೆ ಹಾಕಿದ ವಿಧ್ಯಾರ್ಥಿನಿಯನ್ನು ಇತರ ವಿಧ್ಯಾರ್ಥಿಗಳ ಎದುರೇ ಉಪನ್ಯಾಸಕರು ಅವಮಾನ ಮಾಡಿದಕ್ಕೆ ಡೆಂಟಲ್ ಕಾಲೇಜು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.


ಯಶಸ್ವಿನಿ (23) ಮೃತ ವಿದ್ಯಾರ್ಥಿನಿಯಾಗಿದ್ದು, ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದ ಈಕೆ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಆರೋಪ ಕೇಳಿಬಂದಿದೆ. ಪರಿಮಳ ಮತ್ತು ಭೋದೆವಯ್ಯ ದಂಪತಿಯ ಏಕೈಕ ಪುತ್ರಿ ಯಶಸ್ವಿನಿ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಬೊಮ್ಮನಹಳ್ಳಿಯ ಪ್ರತಿಷ್ಠಿತ ಡೆಂಟಲ್ ಕಾಲೇಜಿನಲ್ಲಿ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿ (Oral Medicine and Radiology) ವಿಭಾಗದಲ್ಲಿ 3ನೇ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಕಣ್ಣು ನೋವಿನ ಕಾರಣ ರಜೆ ಹಾಕಿದ್ದ ಯಶಸ್ವಿನಿ, ಗುರುವಾರ ಕಾಲೇಜಿಗೆ ತೆರಳಿದ್ದಳು. ಈ ವೇಳೆ ಉಪನ್ಯಾಸಕರು ವಿದ್ಯಾರ್ಥಿಗಳ ಎದುರೇ ಆಕೆಯನ್ನು ಹೀನಾಯವಾಗಿ ಅವಮಾನಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ತೀವ್ರವಾಗಿ ನೊಂದಿದ್ದ ಈಕೆ ಪ್ರಾಣಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾಳೆ ಎನ್ನಲಾಗಿದೆ.

ಈ ಘಟನೆ ತಿಳಿಯುತ್ತಿದ್ದಂತೆಯೇ ಯಶಸ್ವಿನಿ ಸಹಪಾಠಿಗಳು ಶವಾಗಾರದ ಮುಂದೆ ಜಮಾಯಿಸಿ ಆಕ್ಸ್‌ಫರ್ಡ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು. ‘ಯಶಸ್ವಿನಿ ಓದಿನಲ್ಲಿ ಮುಂದಿದ್ದಳು, ಆದರೆ ಕಾಲೇಜಿನ ಕಿರುಕುಳ ಆಕೆಯನ್ನು ಬಲಿಪಡೆದಿದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಆಕೆಗೆ ನ್ಯಾಯ ಒದಗಿಸಬೇಕೆಂದು ಘೋಷಣೆ ಕೂಗಿದರು. ಸದ್ಯ ಆನೇಕಲ್ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share Information