ಮಂಗಳೂರು ಮೇ 19: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ರಾಜ್ಯ ಸರಕಾರದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ (VHP) ಮತ್ತು ಭಜರಂಗದಳ, ಸರ್ಕಾರದ ಈ ನಿರ್ಧಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ. “ಕರ್ನಾಟಕದಲ್ಲಿ ಪ್ರಸ್ತುತ ಹಿಜಾಬ್ ಪ್ರೇಮಿ ಸರ್ಕಾರವಿದ್ದು, ಇಂತಹ ನಿರ್ಧಾರಗಳ ಮೂಲಕ ಧರ್ಮಾಂಧತೆಯನ್ನು ಪ್ರಚೋದಿಸುತ್ತಿದೆ” ಎಂದು ಹಿಂದೂ ಸಂಘಟನೆಯ ಪ್ರಮುಖ ನಾಯಕ ಶರಣ್ ಪಂಪ ವೆಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಹಿಂದೆ ರಾಜ್ಯದೆಲ್ಲೆಡೆ ಹಿಜಾಬ್ ವಿವಾದ ಭುಗಿಲೆದ್ದಿದ್ದ ಸಂದರ್ಭದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಕಾಪಾಡಲಾಗಿತ್ತು. ಆದರೆ, ಈಗ ಯಾವುದಾದರೂ ಸಂಘಟನೆಗಳು ಹಿಜಾಬ್ ಧರಿಸಿ ಬರುವಂತೆ ಕರೆ ನೀಡಿದರೆ ಹಿಂದೂಪರ ಸಂಘಟನೆಗಳು ಸುಮ್ಮನಿರದೆ ಬೀದಿಗಿಳಿದು ಹೋರಾಟ ಮಾಡಲಿವೆ. ಈ ಹೋರಾಟದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಪ್ರಸ್ತುತ ಸರ್ಕಾರವೇ ನೇರ ಹೊಣೆಯಾಗಲಿದೆ,” ಎಂದು ಶರಣ್ ಪಂಪವೆಲ್ ಎಚ್ಚರಿಸಿದ್ದಾರೆ. ಸರ್ಕಾರದ ಈ ಧೋರಣೆಯನ್ನು ಖಂಡಿಸಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅದಕ್ಕೆ ವಿಎಚ್ಪಿ, ಭಜರಂಗದಳ ಬೆಂಬಲ ನೀಡಲಿದೆ ಎಂದರು.