Connect with us

    LATEST NEWS

    ನನ್ನ ಅಳಿಯನನ್ನು ಗಲ್ಲಿಗೆ ಹಾಕಿ, ಬೇಕಾದದ್ದು ಮಾಡಿ – ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಆರೋಪಿಯ ಅತ್ತೆಯ ಆಕ್ರೋಶ

    ಕೋಲ್ಕತ್ತಾ: ಟ್ರೇನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆಗೈದಿರುವ ತನ್ನ ಅಳಿಯನನ್ನು ಗಲ್ಲಿಗೇರಿಸಿ, ಬೇಕಾದದ್ದನ್ನು ಮಾಡಿ ಎಂದು ಆತನ ಅತ್ತೆ ಆಕ್ರೋಶ ಹೊರಹಾಕಿದ್ದಾರೆ.

    ಹತ್ಯೆಯ ನಂತರ ನಡೆಯುತ್ತಿರುವ ತನಿಖೆ ಮತ್ತು ಪ್ರತಿಭಟನೆಗಳ ನಡುವೆ, ಆರೋಪಿ ಸಂಜಯ್ ರಾಯ್‍ನ ಅತ್ತೆ ದುರ್ಗಾ ದೇವಿ ಮಾಧ್ಯಮಗಳ ಮುಂದೆ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಆರೋಪಿ ಸಂಜಯ್ ಒಬ್ಬನೇ ಕೃತ್ಯ ಎಸಗಿದಂತೆ ಕಾಣುತ್ತಿಲ್ಲ. ಈ ಕೃತ್ಯದಲ್ಲಿ ಅವನ ಜೊತೆ ಬೇರೆಯವರು ಇದ್ದಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

    ಆರೋಪಿ ಸಂಜಯ್ ತನ್ನ ಪತ್ನಿಗೂ ಹಿಂಸೆ ಕೊಡುತ್ತಿದ್ದ. ನನ್ನ ಮಗಳ ಜೊತೆ ಮದುವೆ ಬಳಿಕ ಆರಂಭದಲ್ಲಿ 6 ತಿಂಗಳು ಮಾತ್ರ ಆತ ಚೆನ್ನಾಗಿದ್ದ. ಬಳಿಕ ಆಕೆಗೆ ಥಳಿಸುತ್ತಿದ್ದ. ಇದರಿಂದ ಆಕೆ 3 ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಗೆ ಗರ್ಭಪಾತವಾಗಿತ್ತು. ಈ ಬಗ್ಗೆ ದೂರು ಸಹ ದಾಖಲಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಇದಾದ ಬಳಿಕ ನನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು. ಅವಳ ಚಿಕಿತ್ಸೆಯ ಎಲ್ಲಾ ಖರ್ಚುನ್ನು ನಾನು ಭರಿಸಿದ್ದೇನೆ ಎಂದಿದ್ದಾರೆ. ಸಂಜಯ್ ಒಳ್ಳೆಯವನಲ್ಲ. ಅವನನ್ನು ಗಲ್ಲಿಗೇರಿಸಿ, ಅವನಿಗೆ ನೀವು ಬೇಕಾದುದನ್ನು ಮಾಡಿ. ಆದರೆ ಆತ ಒಬ್ಬನಿಂದಲೇ ಇದು ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

    ಆ.9 ರಂದು ಆರ್‍ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆ ಶವವಾಗಿ ಪತ್ತೆಯಾಗಿದ್ದಳು. ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶದ ವಿವಿಧೆಡೆ ಭಾರೀ ಪ್ರತಿಭಟನೆಗಳು ನಡೆದಿದ್ದವು.

    ಈ ಪ್ರಕರಣದ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಕೇಸ್ ದಾಖಲಿಸಿದೆ. ಪ್ರಕರಣದ ವಿಚಾರಣೆಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply