Connect with us

DAKSHINA KANNADA

ಪರಿಸರ ಉಳಿಸುವಂತೆ ಹಸಿರು ದಳದಿಂದ ಆರಂಭವಾಗಿದೆ ಜಾಗೃತಿಯ ಆಗ್ರಹ…..

ಮಂಗಳೂರು, ಜನವರಿ 23: ನದಿಗೆ,ರಸ್ತೆ ಬದಿಗೆ ತ್ಯಾಜ್ಯ ಎಸೆಯದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡರೂ,ಜನ ಮಾತ್ರ ಈ ಅವ್ಯವಸ್ಥೆಯಿಂದ ಹೊರ ಬಂದಿಲ್ಲ. ನಿರಂತರವಾಗಿ ರಸ್ತೆ ಹಾಗು ನದಿಗಳಿಗೆ ತ್ಯಾಜ್ಯ ಹಾಕುವುದರಿಂದಾಗಿ ರಸ್ತೆ ತುಂಬಾ ದುರ್ವಾಸನೆ ಹಾಗೂ ನದಿ ನೀರು ಮಲಿನವಾಗುತ್ತಿದೆ. ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇದೀಗ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಆರಂಭಗೊಂಡಿದೆ.

ಮುಖ್ಯವಾಗಿ ಮಂಗಳೂರು ಹೊರವಲಯದ ನೇತ್ರಾವತಿ ನದಿಗೆ ಪ್ರತಿನಿತ್ಯ 2 ರಿಂ3 ಕ್ವಿಂಟಾಲ್ ನಷ್ಟು ಪ್ರಮಾಣದ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ‌. ಮುಖ್ಯವಾಗಿ ಕೋಳಿ ಹಾಗೂ‌ ಮಾಂಸದ ತ್ಯಾಜ್ಯಗಳು, ಮನೆಯಲ್ಲಿ ಬಳಸಿ ಬಿಸಾಕಿದ ತ್ಯಾಜ್ಯಗಳು, ಅಂಗಡಿಗಳ ಕೊಳೆತ ಸಾಮಾನುಗಳು ಹೀಗೆ ವಿವಿಧ ಪ್ರಕಾರದ ತ್ಯಾಜ್ಯಗಳನ್ನು ನೇತ್ರಾವತಿ ನದಿಗೆ ಸುರಿಯುವುದರಿಂದ ನದಿ ನೀರು ದಿನದಿಂದ ದಿನಕ್ಕೆ ಮಲಿನವಾಗುತ್ತಿದೆ.

ಮಂಗಳೂರು ನಗರ ಸೇರಿದಂತೆ ಪುತ್ತೂರು, ಬಂಟ್ವಾಳದ ಜನರಿಗೆ ಕುಡಿಯುವ ನೀರು ಪೂರೈಸುವ ನೇತ್ರಾವತಿಗೆ ಈ ಮಟ್ಟದಲ್ಲಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದ್ದು, ಇದರ ತಡೆಗೆ ಹಲವು ಕ್ರಮಗಳನ್ನು ಕೈಗೊಂಡರೂ,ಜನ ಮಾತ್ರ ಈ ವ್ಯವಸ್ಥೆಯಿಂದ ಹೊರ ಬರುತ್ತಿಲ್ಲ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನೇತ್ರಾವತಿ ಸೇತುವೆಯ ಇಕ್ಕೆಲಗಳಲ್ಲಿ ಇತ್ತೀಚೆಗಷ್ಟೇ ತಂತಿ ಬೇಲಿಯನ್ನು ಅಳವಡಿಸುವ ಮೂಲಕ ನದಿಗೆ ಹಾರುವುದನ್ನು ತಕ್ಕ ಮಟ್ಟಿಗೆ ನಿಯಂತ್ರಣಕ್ಕೆ ತರಲಾಗಿದೆ.

ತಂತಿ ಬೇಲಿ ಅಳವಡಿಸಿರುವುದರಿಂದ ನದಿಗೆ ತ್ಯಾಜ್ಯ ಹಾಕುವವರಿಗೂ ತೊಂದರೆಯಾಗಿದ್ದು, ಈ ಕಸವೆಲ್ಲಾ ಇದೀಗ ಸೇತುವೆಯು ಆರಂಭಗೊಳ್ಳುವ ಹಾಗೂ ಮುಗಿಯುವ ಸ್ಥಳಕ್ಕೆ ಶಿಫ್ಟ್ ಆಗಿದೆ. ಈ ಮೂಲಕ ನದಿಯ ಬ್ಯಾಕ್ ವಾಟರ್ ಪ್ರದೇಶಕ್ಕೆ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಈ ನೀರಿನ ಮೂಲಕ ತ್ಯಾಜ್ಯಗಳು ಮತ್ತೆ ನದಿ ಸೇರುತ್ತಿದೆ. ಅಲ್ಲದೆ ಹೆದ್ದಾರಿಯ ಇಕ್ಕೆಲಗಳಲ್ಲೂ ಕಸವನ್ನು ಎಲ್ಲೆಂದರಲ್ಲಿ ಚೆಲ್ಲುವ ಮೂಲಕ ಇಡೀ ಹೆದ್ದಾರಿಯನ್ನೇ ದುರ್ವಾಸನೆಯುಕ್ತವಾಗಿ ಮಾಡಲಾಗುತ್ತಿದೆ. ಜನರಿಗೆ ಇದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದು ಕಳೆದ ಒಂದು ವಾರದಿಂದ ನೇತ್ರಾವತಿ ಸೇತುವೆಯ ಬಳಿ ನಡೆಯುತ್ತಿದೆ.

ಹಸಿರು ದಳ ಹಾಗೂ ಇತರ ಸಂಘಟನೆಗಳು ಸೇರಿ ಈ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ತ್ಯಾಜ್ಯ ಸುರಿಯಲು ಬರುವ ವಾಹನಗಳಿಗೆ ಪ್ಲೇ ಕಾರ್ಡ್, ಭಿತ್ತಿಪತ್ರಗಳ ಮೂಲಕ ಜಾಗೃತಗೊಳಿಸಲಾಗುತ್ತಿದೆ. ಕೇವಲ ದಕ್ಷಿಣಕನ್ನಡ ಜಿಲ್ಲೆಯ ತ್ಯಾಜ್ಯವಲ್ಲದೆ ,ಪಕ್ಕದ ಕೇರಳ ಭಾಗದಿಂದಲೂ ನೇತ್ರಾವತಿ ನದಿಗೆ ವಾಹನಗಳ ಮೂಲಕ ಆಗಮಿಸಿ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದು, ಇದೀಗ ಸ್ಥಳೀಯ ನಿವಾಸಿಗಳೂ ಈ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ಸುರಿಯದಂತೆ ಕಾನೂನು ಇದ್ದರೂ,ಇದರ ಸರಿಯಾದ ಪಾಲನೆಯಾಗದ ಕಾರಣ ದಕ್ಷಿಣಕನ್ನಡ ಜಿಲ್ಲೆಯ ಬಹುತೇಕ ರಸ್ತೆಗಳ ಇಕ್ಕೆಲಗಳು ಇಂದು ಮಿನಿ ಡಂಪಿಗ್ ಯಾರ್ಡ್ ಗಳಾಗಿ ಬದಲಾಗಿವೆ. ಈ ವ್ಯವಸ್ಥೆಯನ್ನು ತಡೆಯಬೇಕಾದ ಸ್ಥಳೀಯಾಡಳಿತಗಳು ಕಣ್ಣಿದ್ದೂ ಕುರುಡರಂತಾದ ಕಾರಣ ಇದೀಗ ಪರಿಸರ ಕಾಳಜಿಯ ಜನರೇ ರಸ್ತೆಗೆ ಇಳಿದು ಜಾಗೃತಿ ಹಾಗೂ ಹೋರಾಟಕ್ಕೆ ಮುಂದಾಗಿದ್ದಾರೆ.

Video: