Connect with us

LATEST NEWS

ಮೈಸೂರು ದಸರಾ ಮೀರಿಸುವ ರೀತಿಯಲ್ಲಿದೆ ಮಂಗಳೂರು ದಸರಾ ವೈಭವ

ಮೈಸೂರು ದಸರಾ ಮೀರಿಸುವ ರೀತಿಯಲ್ಲಿದೆ ಮಂಗಳೂರು ದಸರಾ ವೈಭವ

ಮಂಗಳೂರು ಅಕ್ಟೋಬರ್ 8: ರಾಜ್ಯ ಸರಕಾರದ ಸಂಪೂರ್ಣ ಸಹಕಾರದಿಂದ ನಡೆಯುವ ಮೈಸೂರು ದಸರಾ ವೈಭವವನ್ನು ಕೇವಲ ಭಕ್ತರ ಸಹಕಾರದಿಂದ ನಡೆಯುವ ಮಂಗಳೂರು ದಸರಾ ಮೀರಿಸುವ ರೀತಿಯಲ್ಲಿ ನಡೆಯುತ್ತಿದೆ. ಮಂಗಳೂರು ದಸರಾ ಇಡೀ ಕಡಲ ನಗರಿ ಮಂಗಳೂರನ್ನು ಬೆಳಕಿನ ಚಿತ್ತಾರದಲ್ಲಿ ಮುಳುಗಿಸಿದೆ.

ಮಂಗಳೂರಿನ ಇತಿಹಾಸ ಪ್ರಸಿದ್ದ ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ದಸರಾ ಮಂಗಳೂರು ದಸರಾ ಎಂದು ಪ್ರಖ್ಯಾತಿ ಪಡೆದಿದ್ದು, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯುತ್ತಿದೆ.

ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಕ್ಷೇತ್ರ ಮಾತ್ರವಲ್ಲದೆ ದಸರಾ ಮೆರವಣಿಗೆ ಹಾದುಹೋಗುವ ನಗರದ ಸುಮಾರು 7 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಕ್ಷೇತ್ರದ ವತಿಯಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ಬಾರಿಯ ದಸರಾಕ್ಕಾಗಿ 10 ಲಕ್ಷ ದೊಡ್ಡ ಪ್ರಮಾಣದ ಬಲ್ಬ್ ಗಳು ಸೇರಿದಂತೆ ಒಟ್ಟು 22 ಲಕ್ಷ ಬಲ್ಬ್ ಗಳಿಂದ ಶೃಂಗರಿಸಲಾಗಿದೆ. ಇಡೀ ನಗರ ಮತ್ತು ಕುದ್ರೋಳಿ ಕ್ಷೇತ್ರದ ಆವರಣ ಝಗಮಗಿಸುವ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.

ದಸರಾ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ದಿನದಿಂದ 9 ದಿನಗಳ ಕಾಲ ಸಂಜೆ 6 ಗಂಟೆಯಾಗುತ್ತಿದ್ದಂತೆ ನಗರದೆಲ್ಲೆಲ್ಲಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಇಷ್ಟೊಂದು ಪ್ರಮಾಣದ ಬೆಳಕಿನ ಚಿತ್ತಾರಕ್ಕಾಗಿ ಕ್ಷೇತ್ರದಿಂದ ಬರೋಬ್ಬರಿ 75 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದ್ದು. ಸರ್ಕಾರದ ಅಥವಾ ಇನ್ಯಾವುದೇ ಅನುದಾನ ಇಲ್ಲದೆ ಕ್ಷೇತ್ರದ ವತಿಯಿಂದಲೇ ಈ ಬೆಳಕಿನ ಸಂಯೋಜನೆ ಮತ್ತು ಉತ್ಸವ ಮಾಡುವುದು ಇಲ್ಲಿನ ವಿಶೇಷ.

ಹತ್ತು ದಿನಗಳ ಮಂಗಳೂರು ದಸರಾ ಉತ್ಸವ ಈ ಬಾರಿ ಇಂದು ಕೊನೆಗೊಳ್ಳುತ್ತದೆ. ಹತ್ತು ದಿನಗಳ ಕಾಲ ಪೂಜಿಸಿದ ನವದುರ್ಗೆಯರು ಮತ್ತು ಗಣಪತಿ, ಶಾರದಾ ಮಾತೆಯ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ನಗರ ಪ್ರದಕ್ಷಿಣೆ ಬರಲಾಗುವುದು. ವಿದ್ಯುತ್ ದೀಪಗಳ ಆಕರ್ಷಣೆಯ ಜೊತೆಗೆ ನೂರಾರು ಸ್ತಬ್ಧಚಿತ್ರಗಳ ಜೊತೆ ಸಾಗುವ ಮೆರವಣಿಗೆ ಚಿತ್ತಾಕರ್ಷಕ. ಹೀಗಾಗಿ ಕೊನೆಯ ದಿನದ ವಿಜಯದಶಮಿಯ ಈ ವೈಭವದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

Facebook Comments

comments