ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರು

ಮಂಗಳೂರು,ನವಂಬರ್ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ.

ಗ್ರಾಮ ಪಂಚಾಯತ್ ಸದಸ್ಯನೋರ್ವನ ಮೇಲೆ ಮೂವರ ತಂಡ ತಲವಾರು ದಾಳಿ ನಡೆಸಿದ್ದು, ಸದಸ್ಯ ಸೇರಿದಂತೆ ಆತನ ಪತ್ನಿಗೆ ಗಂಭೀರ ಗಾಯಗಳಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ.

ಬಂಟ್ವಾಳ ತಾಲೂಕಿನ ಮೇರ ಮಜಲು ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಎಂಬವರ ಮೇಲೆ ಮೂವರು ದುಷ್ಕರ್ಮಿಗಳ ತಂಡ ಇಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ತಲವಾರು ಬೀಸಿ ಹತ್ಯೆಗೆ ಯತ್ನಿಸಿದೆ.

ಮೇರಮಜಲಿನಲ್ಲಿರುವ ಯೋಗೀಶ್ ಪ್ರಭೂ ಮನೆಗೆ ಬೆಳ್ಳಂಬೆಳಗೆ ನುಗ್ಗಿದ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದು, ಹಲ್ಲೆಯಿಂದಾಗಿ ಯೋಗೀಶ್ ಪ್ರಭು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ.

ಹಲ್ಲೆಯನ್ನು ತಡೆಯಲು ಯತ್ನಿಸಿದ ಅವರ ಪತ್ನಿ ಶೋಭಾ ಇವರಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಯೋಗೀಶ್ ಪ್ರಭು ಶೋಭಾ ನೀಡಿದ ಹೇಳಿಕೆಯ ಪ್ರಕಾರ ಕೊಲೆ ಯತ್ನ ನಡೆಸಿದ ತಂಡದಲ್ಲಿ ಸ್ಥಳೀಯ ಯುವಕರೇ ಇದ್ದರೆಂದು ತಿಳಿಸಿದ್ದಾರೆ.

ಕೊಲೆ ಯತ್ನದ ಪ್ರಮುಖ ಆರೋಪಿ ರೌಡಿ ಶೀಟರ್ ಪ್ರಸಾದ್ ಬೆಳ್ಚಾಡ ಎಂದು ಗುರುತಿಸಲಾಗಿದ್ದು, ಪೋಲೀಸರು ಮೂವರು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.

ಬೆಳಿಗ್ಗಿನ ಜಾವ ಸುಮಾರು 4 ಗಂಟೆ ವೇಳೆಗೆ ಯೋಗೀಶ್ ಪ್ರಭು ಮನೆಯಿಂದ ಕಿರುಚಾಟದ ದ್ವನಿ ಕೇಳಿ ಬಂದಿತ್ತು.

ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಮನೆ ಮಂದಿ ಮನೆಗೆ ತೆರಳಿ ನೋಡಿದಾಗ ರಕ್ತದ ಮಡುವಿನಲ್ಲಿ ದಂಪತಿಗಳು ಬಿದ್ದಿರುವುದು ಬೆಳಕಿಗೆ ಬಂದಿದೆ.

ತಕ್ಷಣವೇ ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಿಕೊಂಡಿರುವ ಪ್ರಸಾದ್ ಹಾಗೂ ಯೋಗೀಶ್ ಮಧ್ಯೆ ಪೂರ್ವ ದ್ವೇಷ ಇದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅಲ್ಲದೆ ಇದೇ ವ್ಯಕ್ತಿ ಈ ಹಿಂದೆಯೂ ಯೋಗೀಶ್ ಪ್ರಭು ಮೇಲೆ ಹಲ್ಲೆ ನಡೆಸಿರುವ ವಿಚಾರವೂ ಇದೀಗ ಬೆಳಕಿಗೆ ಬಂದಿದೆ.

ಆದರೆ ಪೂರ್ವ ದ್ವೇಷಕ್ಕೆ ಪ್ರಮುಖ ಕಾರಣ ಏನು ಎನ್ನುವುದು ಪೋಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಸೇರಿದಂತೆ ಹಿರಿಯ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಆರೋಪಿಗಳ ಪತ್ತೆಗಾಗಿ ಪೋಲೀಸ್ ತಂಡವನ್ನೂ ರಚಿಸಲಾಗಿದೆ.