Connect with us

    DAKSHINA KANNADA

    ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ.. ವಿಶೇಷ ಚೇತನ ವ್ಯಕ್ತಿಯ ಮಾಸಾಶನ ಅನ್ಯವ್ಯಕ್ತಿಯ ಪಾಲು

    ಪುತ್ತೂರು ಸೆಪ್ಟೆಂಬರ್ 17: ಸರಕಾರಿ ಅಧಿಕಾರಿಗಳು ಮಾಡುವ ನಿರ್ಲಕ್ಷದಿಂದಾಗಿ ವಿಶೇಷ ಚೇತನ ವ್ಯಕ್ತಿಯ ಮಾಸಾಶನ ಈಗ ಬೇರೊಬ್ಬರ ಖಾತೆಗೆ ಜಮಾ ಆಗುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ ಈಗ ಸಮಸ್ಯೆ ಪರಿಹರಿಸಲು ಅಧಿಕಾರಿಗಳ ಮುಂದೆ ದುಂಬಾಲು ಬಿದ್ದಿದ್ದಾರೆ.

    ಅಂಗವಿಕಲ‌ವೇತನ ಪಡೆಯುವ ನಿಟ್ಟಿನಲ್ಲಿ ಬ್ಯಾಂಕ್ ಖಾತೆಯ ಸಂಖ್ಯೆ ನಮೂದಿಸುವ ಸಂದರ್ಭ ದಕ್ಷಿಣಕನ್ನಡ ಜಿಲ್ಲೆಯ‌ ಕಡಬ ತಾಲೂಕು ಸಿಬ್ಬಂದಿ ಎಡವಟ್ಟು ಮಾಡಿದ ಪರಿಣಾಮ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣ ಗೌಡ ಎಂಬುವವರ ಅಂಗವಿಕಲ ವೇತನ ಕಳೆದ ಹತ್ತು ತಿಂಗಳಿಂದ ಅನ್ಯ ವ್ಯಕ್ತಿಯ ಖಾತೆಗೆ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.


    ಅಂಗವಿಕಲ ವೇತನ ಅರ್ಜಿಯ ಜೊತೆ ನೀಡಲಾದ ಬ್ಯಾಂಕ್ ಖಾತೆಯ ವಿವರವನ್ನು ( ಖಾತೆ ಸಂಖ್ಯೆ 130901011001087) ಕಂಪ್ಯೂಟರ್ ನಲ್ಲಿ ದಾಖಲಿಸುವ ಸಂದರ್ಭ ಕೊನೆಯ ಸಂಖ್ಯೆ 7 ರ ಬದಲಾಗಿ 1 ಎಂದು ನಮೂದಿಸಿ ಸಿಬ್ಬಂದಿ ಪ್ರಮಾದ ಎಸಗಿದ್ದಾರೆ. ಇದರಿಂದ ಅರ್ಹ ಫಲಾನುಭವಿಯಾದ ಲಕ್ಷ್ಮಣ ಗೌಡರ ಖಾತೆಗೆ ಜಮೆಯಾಗಬೇಕಾದ ಪ್ರತಿ ತಿಂಗಳ ರೂಪಾಯಿ 600 ವೇತನ ಹಣ ಇನ್ನೊಬ್ಬರಿಗೆ ಜಮೆಯಾಗುತ್ತಿದೆ.


    ಲಕ್ಷ್ಮಣ ಗೌಡರು ಅರ್ಜಿ ಹಾಕಿದ ಬಳಿಕ ಜುಲೈ.1-2019 ರಂದು ಅಂಗವಿಕಲ ವೇತನಕ್ಕೆ ಅರ್ಹರೆಂದು ಮಂಜೂರಾತಿ ಪತ್ರ ದೊರಕಿತ್ತು. ಆದರೂ ತನ್ನ ಖಾತೆಗೆ ಹಣ ಜಮೆಯಾಗಲಿಲ್ಲ. ಹತ್ತಾರು ಭಾರಿ ಗ್ರಾಮಕರಣಿಕರ ಕಛೇರಿ, ಹಾಗೂ ಬ್ಯಾಂಕ್‍ಗೆ ಅಲೆದಾಟ ನಡೆಸಿದಾಗಲೂ ಸಮರ್ಪಕ ಉತ್ತರ ದೊರೆಯದೆ ಇದ್ದಾಗ ಕಡಬ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾಗ ಕಂಪ್ಯೂಟರಿನಲ್ಲಿ ದಾಖಲಿಸಿರುವ ತನ್ನ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ವೆತ್ಯಾಸವಾಗಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಲಕ್ಷ್ಮಣ ಗೌಡರಿಗೆ ಸೇರಬೇಕಿದ್ದ ಹಣ ಬೇರೊಬ್ಬರ ಖಾತೆಗೆ ಜಮೆಯಾಗುತ್ತಿದೆ.


    ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ. ಮನೆಯಲ್ಲಿ ಅಷ್ಟೇನು ಆದಾಯವಿಲ್ಲ. ಲಕ್ಷ್ಮಣ ಗೌಡರಿಗೆ ದೃಷ್ಟಿ ದೋಷದ ಹಿನ್ನೆಲೆ ಅಂಗವಿಕಲ ವೇತನಕ್ಕೆ ಅರ್ಜಿ ಹಾಕಿದ್ದರು. ಎರಡು ವರ್ಷಗಳ ಹಿಂದೆ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆ ನಡೆದು ಲಕ್ಷಾಂತರ ರೂ ಸಾಲದಲ್ಲಿದ್ದಾರೆ. ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದರೂ, ದುಡಿಯುವ ಚೈತನ್ಯವನ್ನು ಮಾತ್ರ ಕಳೆದುಕೊಂಡಿದ್ದಾರೆ. ಈಗಲೂ ಚಿಕಿತ್ಸೆ ಮುಂದುವರಿಸುತ್ತಿದ್ದು ತಿಂಗಳಿಗೆ 2.500 ರೂ ವೆಚ್ಚ ತಗಲುತ್ತದೆ. ಲಕ್ಷ್ಮಣ ಗೌಡರ ಪತ್ನಿ ಮನೆಯ ಖರ್ಚು ಸಾಗಿಸಲು ರಾತ್ರಿ ಹಗಲೆನ್ನದೆ ಬೀಡಿ ಕಟ್ಟುತ್ತಾ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಲಕ್ಷ್ಮಣ ಗೌಡರಿಗೆ ಇಬ್ಬರು ಮಕ್ಕಳ ಪೈಕಿ ಒಬ್ಬಾತ ದೀಕ್ಷಿತ್ ಸುಳ್ಯದಲ್ಲಿ ಡಿಪ್ಲೊಮ ವ್ಯಾಸಂಗ ಮಾಡುತ್ತಿದ್ದು ರಜಾ ದಿನಗಳಲ್ಲಿ ಅಡಕೆ ಸುಳಿಯುವ ಕೂಲಿ ಕೆಲಸ ಮಾಡಿಕೊಂಡು ತಮ್ಮ ವಿದ್ಯಾಭ್ಯಾಸದ ಖರ್ಚಿಗೆ ಸ್ವಲ್ಪ ಮಟ್ಟಿನ ಆದಾಯವನ್ನು ಭರಿಸಿಕೊಳ್ಳುತ್ತಿದ್ದಾನೆ. ಎರಡನೆಯವ ಗೌತಮ್ ಕಾಣಿಯೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 10 ನೇ ತರಗತಿ ಅಭ್ಯಸುತ್ತಿದ್ದ ಸಂದರ್ಭ 2019 ರ ಸೆ.5 ರಂದು ಶಾಲಾ ಆಟದ ಮೈದಾನದ ಪಕ್ಕದ ಜಾಗದಲ್ಲಿರುವ ಇಂಗು ಗುಂಡಿಗೆ ಬಿದ್ದು ಮೃತಪಟ್ಟಿದ್ದ . ಆರ್ಥಿಕ ಸಂಕಷ್ಟ , ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಣ ಗೌಡರಿಗೆ ಗೌತಮ್ ಸಾವು ಇನ್ನಷ್ಟು ಜರ್ಜರಿತವಾಗಿಸಿದೆ.

    ಈ ಮದ್ಯೆ ಅಂಗವಿಕಲ ವೇತನ ಹಣ ಜಮೆ ಬಗ್ಗೆ ಗೊಂದಲ ವೇರ್ಪಟ್ಟಿರುವುದು ಇನ್ನಷ್ಟು ಸಂಕಷ್ಟಕ್ಕೆ ಎಡೆಮಾಡಿದೆ. ತನ್ನ ಖಾತೆಗೆ ಬರಬೇಕಾಗಿದ್ದ ಹಣ ಕಾಣಿಯೂರಿನ ಸ್ಥಳೀಯ ವ್ಯಕ್ತಿಯೋರ್ವರ ಖಾತೆಗೆ ಜಮೆಯಾಗುತ್ತಿದ್ದು, ಈ ವಿಚಾರವನ್ನು ಲಕ್ಷ್ಮಣ ಗೌಡ ಆ ವ್ಯಕ್ತಿಯ ಗಮನಕ್ಕೂ ತಂದಿದ್ದಾರೆ. ಆದರೆ ಆ ವ್ಯಕ್ತಿ ಹಣ ನೀಡಲು ಕೊಂಚ ಹಿಂದೇಟು ಹಾಕುತ್ತಿದ್ದು, ಹಣಕ್ಕಾಗಿ ಲಕ್ಷ್ಮಣ ಗೌಡರು ಸರಕಾರಿ ಕಛೇರಿಗೆ ಪ್ರತಿನಿತ್ಯ ಅಲೆದಾಡಿ ಬೇಸತ್ತು ಹಣದ ಆಸೆಯನ್ನೇ ಬಿಟ್ಟಿದ್ದರು. ಇದೀಗ ಹಣವಿಲ್ಲದೆ ಸಂಸಾರ ಸಾಗಿಸುವುದು ಕಷ್ಟ ಎಂದು ಮತ್ತೆ ತನ್ನ ಹಣಕ್ಕಾಗಿ ಅಧಿಕಾರಿಗಳ ಮುಂದೆ ದಂಬಾಲು ಬೀಳಲಾರಂಭಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply