ತುಮಕೂರು, ಮಾರ್ಚ್ 21: ಮೇಲಾಧಿಕಾರಿಯ ಕಿರುಕುಳದಿಂದ ಮನನೊಂದು ಸರಕಾರಿ ಅಧಿಕಾರಿಯೊಬ್ಬರು ವೀಡಿಯೋ ಮಾಡಿ ಸಹೋದ್ಯೋಗಿಗಳಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ.

ಮೃತರನ್ನು ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದೆ. ಪಾವಗಡ ಪಟ್ಟಣದ ಆಪ್ ಬಂಡೆ ಪ್ರದೇಶದಲ್ಲಿರುವ ಕಚೇರಿಯಲ್ಲೇ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಾವಿಗೆ ಮುನ್ನ ಮಲ್ಲಿಕಾರ್ಜುನ್ ವೀಡಿಯೋವೊಂದನ್ನು ಮಾಡಿ ಸಹೋದ್ಯೋಗಿಗಳಿಗೆ ಕಳುಹಿಸಿದ್ದು ಅದರಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ವಿರುದ್ಧ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಕುಟುಂಬದವರು ತಮಗೆ ನೀಡಿದ ಬೆಂಬಲವನ್ನು ಸ್ಮರಿಸಿದ ಅವರು, ನಿರಂತರ ಒತ್ತಡದಿಂದ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ. ಕುಟುಂಬದವರು ಯಾವುದೇ ಪ್ರತೀಕಾರಕ್ಕೆ ಮುಂದಾಗಬಾರದು, ಕಾನೂನು ಮತ್ತು ದೇವರು ನ್ಯಾಯ ಒದಗಿಸುತ್ತಾರೆ ಎಂಬ ಸಂದೇಶವನ್ನೂ ಅವರು ವೀಡಿಯೋದಲ್ಲಿ ನೀಡಿದ್ದಾರೆ.
ಮಲ್ಲಿಕಾರ್ಜುನ್ ಪಾವಗಡ ತಾಲೂಕಿನ ಗುಂಡರ್ಲಾಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ಒಂದು ವಾರದಲ್ಲಿ ಅವರ ಸೇವಾ ಅವಧಿ ಪೂರ್ಣಗೊಳ್ಳಬೇಕಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.