ಕುಂದಾಪುರ, ಸೆಪ್ಟೆಂಬರ್ 7: ಸಮುದ್ರದಲ್ಲಿ ಈಜಲು ತೆರಳಿದ್ದ 7 ಜನರಲ್ಲಿ ಮೂವರು ಯುವಕರು ನೀರುಪಾಲಾದ ಘಟನೆ ಗೋಪಾಡಿ ಬೀಚ್ ನಲ್ಲಿ ಇಂದು ನಡೆದಿದೆ.


ಬೆಂಗಳೂರಿನಿಂದ 10 ಮಂದಿ ಯುವಕರ ತಂಡ ಗೋಪಾಡಿಗೆ ಬಂದಿದ್ದು, ಅದರಲ್ಲಿ 9 ಮಂದಿ ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ನಾಲ್ವರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, ಅವರಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ಬೆಂಗಳೂರಿನ ಗೌತಮ್(19), ಲೋಕೇಶ್(19), ಆಶೀಶ್(18) ಎಂದು ಗುರುತಿಸಲಾಗಿದೆ. ನಿರೂಪ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ವಿವಿಧೆಡೆ ಕಾಲೇಜು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ ತಂಡವು ಎಲ್ಲರಿಗೂ ಸಂಪರ್ಕದಲ್ಲಿದ್ದ ಸ್ನೇಹಿತನೊಬ್ಬನ ನೇತೃತ್ವದಲ್ಲಿ 10 ಮಂದಿ ಒಗ್ಗೂಡಿ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ, ಪೊಲೀಸರು ಆಗಮಿಸಿದ್ದಾರೆ. ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಸ್ಥಳದಲ್ಲಿ ನೂರಾರು ಸಂಖ್ಯೆಯ ಜನ ಜಮಾಯಿಸಿದ್ದಾರೆ.

Share Information