ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಕ್ಸಿಯಲ್ಲಿ 1 ಕೆಜಿ ಚಿನ್ನ ಅಕ್ರಮ ಸಾಗಾಟ

ಮಂಗಳೂರು ಮೇ 16: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಿಕ್ಸಿಯ ಮೋಟಾರ್​ನಲ್ಲಿ ಚಿನ್ನ ಅಡಗಿಸಿಟ್ಟು ದುಬೈನಿಂದ ಮಂಗಳೂರಿಗೆ ಅಕ್ರಮ ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತನಿಂದ ಸುಮಾರು 1052.90 ಗ್ರಾಮ ಚಿನ್ನವನ್ನು ವಶಕ್ಕೆ ಪಡೆದಿದ್ದು, ಚಿನ್ನದ ಮೌಲ್ಯ ಅಂದಾಜು 34.75 ಲಕ್ಷ ಎಂದು ಹೇಳಲಾಗಿದೆ.

ದುಬೈಯಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನ ಬ್ಯಾಗ್‌ನಲ್ಲಿದ್ದ ಮಿಕ್ಸಿಯ ಮೋಟಾರ್‌ನಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.