ಗೋವಾ ಡಿಸೆಂಬರ್ 08: ಗೋವಾದ ನೈಟ್ ಕ್ಲಬ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಮಂದಿ ಸಾವನಪ್ಪಿದ್ದು, ಘಟನೆಯ ಬಳಿಕ ಇದೀಗ ಸರಕಾರ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ.


2023ರಲ್ಲಿ ಕ್ಲಬ್ ಕಾರ್ಯಾಚರಣೆಗೆ ಅನುಮತಿ ನೀಡುವಲ್ಲಿ ಇವರ ಪಾತ್ರ ಇರುವುದರಿಂದ ವಜಾ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ರಾತ್ರಿ ನಡೆದ ಭಾರಿ ಅಗ್ನಿ ದುರಂತದಿಂದಾಗಿ ಐವರು ಪ್ರವಾಸಿಗರು ಹಾಗೂ 20 ಸಿಬ್ಬಂದಿ ಸೇರಿ ಒಟ್ಟು 25 ಮಂದಿ ಸಾವಿಗೀಡಾಗಿದ್ದರು.


ಕ್ಲಬ್ ಆರಂಭವಾಗುವಾಗ ಪಂಚಾಯತ್ ನಿರ್ದೇಶಕರಾಗಿದ್ದ ಸಿದ್ಧಿ ತುಶಾರ್ ಹರ್ಲಾಂಖರ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಡಾ. ಶಮಿಲಾ ಮೋಂತೆರೊ ಹಾಗೂ ಅರ್ಪೊರಾ–ನಗೋವಾ ಗ್ರಾಮ ಪಂಚಾಯತ್‌ನ ಮಾಜಿ ಕಾರ್ಯದರ್ಶಿ ರಘುವೀರ್ ಭಗ್‌ಕರ್ ಅಮಾನತುಗೊಂಡವರು.
ದುರಂತ ನಡೆದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ 2023ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆಗೆ ಅನುಮತಿ ನೀಡಿದವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ನೈಟ್‌ ಕ್ಲಬ್‌ಗೆ ವ್ಯಾಪಾರ ಪರವಾನಗಿ ನೀಡಿದ ಅರ್ಪೊರಾ–ನಗೋವಾ ಪಂಚಾಯತ್‌ನ ಸರಪಂಚ ರೋಷನ್ ರೆಡ್ಕರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಭಾನುವಾರ ನಡೆದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ದೈನಂದಿನ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದ ವ್ಯವಸ್ಥಾಪಕ ಐದನೇ ಆರೋಪಿಯನ್ನು ಸೋಮವಾರ ದೆಹಲಿಯಲ್ಲಿ ಬಂಧಿಸಲಾಗಿದೆ.

Share Information