ಮಂಗಳೂರು ಸೆಪ್ಟೆಂಬರ್ 04: ಇತ್ತೀಚೆಗೆ ಕಟೀಲಿನಲ್ಲಿ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಗೋಣಿಚೀಲ ಉಚಿತವಾಗಿ ನೀಡುವಂತೆ ಒತ್ತಾಯಿಸಿದ ವಿಡಿಯೋದ ಒಂದು ವೈರಲ್ ಆಗಿದ್ದು, ವಿಡಿಯೋ ಮಾಡಿ ಅಂಗಡಿಯ ಮಾಲೀಕರಿಗೆ ಕಿರುಕುಳ ನೀಡಿದ ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆ ವಿಡಿಯೊವನ್ನು ಡಿಲೀಟ್ ಮಾಡಿಸಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘ ಆಗ್ರಹಿಸಿದೆ.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೇಶವಮೂರ್ತಿ ವೈರಲ್ ಆಗಿರುವ ವಿಡಿಯೊ ನೋಡಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಗ್ರಾಹಕರು ನ್ಯಾಯಬೆಲೆ ಅಂಗಡಿಯವರಿಗೆ ತೊಂದರೆ ಕೊಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿದೆ. ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಪ್ರತಿ ಕ್ವಿಂಟಲ್‌ಗೆ ಲಾಭಾಂಶವನ್ನು ₹56 ನಿಗದಿ ನಿಗದಿಪಡಿಸಿದ್ದು, ಈ ಪೈಕಿ ₹36 ನಗದು ಹಾಗೂ ₹20 ಪ್ರತಿ ಕ್ವಿಂಟಲ್‌ನ ಎರಡು ಗೋಣಿಚೀಲದ ರೂಪದಲ್ಲಿ ಪಡೆದುಕೊಳ್ಳುವಂತೆ ಸರ್ಕಾರದ ಆದೇಶದಲ್ಲೇ ಉಲ್ಲೇಖವಿದೆ ಎಂದರು.

ಇನ್ನು ವೈರಲ್ ವಿಡಿಯೋದಲ್ಲಿರುವ ಕಟೀಲು ಪಡಿತರ ಅಂಗಡಿಯ ದೀಪಾ ನಾಯಕ್ ಮಾತನಾಡಿ,‘ಕಟೀಲು ಸಮೀಪದ ಸಹೋದರರಿಬ್ಬರು ಅಕ್ಕಿ ತೆಗೆದುಕೊಂಡು ಹೋಗಲು ಬರುವಾಗ ಗೋಣಿಚೀಲ ಉಚಿತವಾಗಿ ನೀಡುವಂತೆ ಗಲಾಟೆ ಮಾಡುತ್ತಾರೆ. ಇತ್ತೀಚೆಗೆ ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ. ಈ ಬಗ್ಗೆ ಆಹಾರ ಸಚಿವರು, ಆಹಾರ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದೇನೆ. ವಿಡಿಯೊ ಡಿಲೀಟ್ ಮಾಡಿಸುವಂತೆ ಬಜಪೆ ಠಾಣೆಗೆ ಆಗಸ್ಟ್ 22ರಂದು ದೂರು ನೀಡಿದ್ದರೂ, ಇದುವರೆಗೆ ಕ್ರಮ ಆಗಿಲ್ಲ’ ಎಂದು ಹೇಳಿದರು. ಸಂಘದ ಪದಾಧಿಕಾರಿಗಳಾದ ಭಾಸ್ಕರ್ ಸಾಲ್ಯಾನ್, ರೋಜ್ ಡಿ.ಎಂ., ಮಂಜುನಾಥ ನಾಯಕ್, ದೀಪಾ ನಾಯಕ್, ಮಹಮ್ಮದ್ ರಫೀಕ್, ನಿತ್ಯಾನಂದ ಇದ್ದರು.

Share Information