ಚಿಕ್ಕಮಗಳೂರು, ಏಪ್ರಿಲ್ 26: ತಂದೆ ಬೈದಿದ್ದರಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ದೇವವೃಂದ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ದೇವವೃಂದ ಗ್ರಾಮದ ನಿವಾಸಿ ಸೌಜನ್ಯ ಪೂಜಾರಿ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಸೌಜನ್ಯ ಅವರು ತಮ್ಮ ತಂದೆ ನಟೇಶ್ ಪೂಜಾರಿ ಅಲಿಯಾಸ್ ಗೋಪಾಲ ಅವರೊಂದಿಗೆ ವಾಸವಾಗಿದ್ದರು. ಶನಿವಾರ ಬೆಳಿಗ್ಗೆ ತಂದೆ ನಟೇಶ್ ಅವರು ಮಾರುಕಟ್ಟೆಯಿಂದ ತರಕಾರಿ ತಂದು, ಮಧ್ಯಾಹ್ನದ ಅಡುಗೆಗೆ ಸಾಂಬಾರು ಮಾಡುವಂತೆ ಮಗಳಿಗೆ ಸೂಚಿಸಿ ಹೊರಗೆ ಹೋಗಿದ್ದರು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅವರು ಮನೆಗೆ ವಾಪಸ್ ಬಂದಾಗ ಸೌಜನ್ಯ ಅಡುಗೆ ಮಾಡದೆ ಇರುವುದು ಕಂಡುಬಂದಿದೆ.
ಈ ವಿಚಾರವಾಗಿ ತಂದೆ ಮಗಳಿಗೆ ಮಧ್ಯಾಹ್ನವಾದರೂ ಸಾಂಬಾರು ಮಾಡಿಲ್ಲವೆಂದು ಗದರಿಸಿದ್ದಾರೆ ಎನ್ನಲಾಗಿದ್ದು, ಬಳಿಕ ತಾವೇ ಪಕ್ಕದ ಮನೆಯಿಂದ ಸಾಂಬಾರು ತರಲೆಂದು ಹೊರಗೆ ಹೋಗಿದ್ದಾರೆ. ಈ ವೇಳೆ ತಂದೆಯ ಮಾತಿನಿಂದ ತೀವ್ರವಾಗಿ ಮನನೊಂದ ಸೌಜನ್ಯ, ತಂದೆ ಹೊರಗೆ ಹೋದ ಕೂಡಲೇ ಮನೆಯ ಒಳಗಿನಿಂದ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ತಂದೆ ವಾಪಸ್ ಬಂದಾಗ ಮಗಳು ಬಾಗಿಲು ತೆರೆಯದಿದ್ದನ್ನು ಕಂಡು ಆತಂಕಗೊಂಡು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಗೋಣಿಬೀಡು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.