ಬೆಂಗಳೂರು, ಫೆಬ್ರವರಿ 9: ಯುವತಿಯೊಬ್ಬಳ ತನ್ನ ಅಮ್ಮ ಮತ್ತು ದೊಡ್ಡಮ್ಮನ ಖಾಸಗಿ ಪೋಟೋಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಮನೆಯವರು ಯುವತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ (Bangalore) ಬೈಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರಿನ ಬ್ಯಾಟರಾಯನಪುರ ವ್ಯಾಪ್ತಿಯ ನಿವಾಸಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳೆದ 25 ವರ್ಷಗಳಿಂದ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕುಟುಂಬ ನೆಲೆಸಿದ್ದು ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಬಿಬಿಎ ಓದಿದ್ದು ನಿರುದ್ಯೋಗಿಯಾಗಿದ್ದಾಳೆ. ಕಿರಿಯ ಮಗಳು ತನ್ನ ಅಧ್ಯಯನ ಮಾಡುತ್ತಿದ್ದು ತಂದೆ ಅಡುಗೆ ಕೆಲಸ ಮಾಡುತ್ತಿದ್ದಾರೆ.
ಒಂದು ವರ್ಷದ ಹಿಂದೆ ಹಿರಿಯ ಮಗಳು ಶೈಕ್ಷಣಿಕ ಮತ್ತು ವೃತ್ತಿಯ ಉದ್ದೇಶಕ್ಕಾಗಿ ಸ್ಮಾರ್ಟ್ಫೋನ್ ಬೇಕೆಂದು ತಂದೆಯ ಬಳಿ ಕೇಳಿಕೊಂಡಿದ್ದಾಳೆ. ತಂದೆ ಮಗಳ ಕೋರಿಕೆಯಂತೆ ಸ್ಮಾರ್ಟ್ಫೋನ್ ತೆಗೆಸಿಕೊಟ್ಟಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಮನೆ ಕೆಲಸ ಮಾಡುತ್ತಿದ್ದಾಗ ತಾಯಿ ಮಗಳಿದ್ದ ಕೋಣೆಯನ್ನು ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಗಳು ವಿಡಿಯೋ ಕರೆಯಲ್ಲಿ ಯುವಕನ ಜೊತೆಗೆ ಮಾತನಾಡುತ್ತಿದ್ದಳು. ತಾಯಿ ಪ್ರವೇಶಿಸುತ್ತಿದ್ದಂತೆ ಮಗಳು ಕರೆಯನ್ನು ದಿಢೀರ್ ಕಡಿತ ಮಾಡಿದ್ದಾಳೆ. ಮಗಳು ಕರೆಯನ್ನು ಕಡಿತ ಮಾಡಿದ ಬಳಿಕ ತಾಯಿಗೆ ಅನುಮಾನ ಬರಲು ಆರಂಭವಾಗಿದೆ.
ಈ ವಿಚಾರವನ್ನು ಆಕೆಯ ತಾಯಿ ಪತಿಗೆ ತಿಳಿಸಿದ್ದರು. ಅದಾದ ನಂತರ ಅನುಮಾನ ಬಂದು ಮೊಬೈಲ್ ಪರಿಶೀಲನೆ ನಡೆಸಿದಾಗ ಕುಟುಂಬ ಸದಸ್ಯರ ಖಾಸಗಿ ಅಂಗಾಗಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಪ್ರಿಯಕರನಿಗೆ ಕಳುಹಿಸಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಯುವತಿಯು ತಾಯಿ ಮಲಗಿದ್ದ ವೇಳೆ ಅವರ ಖಾಸಗಿ ಅಂಗಾಂಗಗಳ ಫೋಟೋಗಳನ್ನು ತೆಗೆದು ಕಳುಹಿಸಿದ್ದಳು ಎಂಬುದು ಮೊಬೈಲ್ ಪರಿಶೀಲಿಸಿದಾಗ ಗೊತ್ತಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೆ, ಯುವತಿಯು ತನ್ನ ದೊಡ್ಡಮ್ಮ ಸ್ನಾನ ಮಾಡುತ್ತಿದ್ದಾಗ ಅವರಿಗೆ ಗೊತ್ತಾಗದಂತೆ ನಗ್ನ ಫೋಟೊ ತೆಗೆದಿದ್ದಾಳೆ. ಅದನ್ನು ಕೂಡ ಪ್ರಿಯಕರನಿಗೆ ಕಳುಹಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.