ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಸಂಚಾರ ಸ್ಥಗಿತ

ಪುತ್ತೂರು ಮಾರ್ಚ್ 3: ಬೆಂಗಳೂರು– ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಸಮೀಪದ ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ಪಲ್ಟಿಯಾದ ಘಟನೆ ನಡೆದಿದೆ.

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಬಳಿಯ ಲಾವತಡ್ಕ ಸಮೀಪದ ಇಂಜಿರ ಎಂಬಲ್ಲಿ ಭಾನುವಾರ ಮಧ್ಯಾಹ್ನ ಎಲ್‌ಪಿಜಿ ಅನಿಲ ಸಾಗಣೆ ಟ್ಯಾಂಕರ್‌ ಉರುಳಿಬಿದ್ದಿದೆ.

ಈ ಘಟನೆಯಿಂದಾಗಿ ಸ್ಥಳದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದ್ದು, ಹೆದ್ದಾರಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಟ್ಯಾಂಕರ್‌ ಬೆಂಗಳೂರಿನ ಕಡೆಗೆ ಅನಿಲ ಸಾಗಿಸುತ್ತಿತ್ತು. ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮಧ್ಯದಲ್ಲಿ ಪಲ್ಟಿಯಾಗಿದೆ. ಶಿರಾಡಿ ಘಾಟಿ ಮಾರ್ಗವಾಗಿ ಮಂಗಳೂರಿನತ್ತ ಬರುತ್ತಿರುವ ಎಲ್ಲ ವಾಹನಗಳನ್ನು ಕಡಬ ಮಾರ್ಗವಾಗಿ ಕಳುಹಿಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗವಾಗಿ ಬೆಂಗಳೂರಿನ ಕಡೆಗೆ ಹೊರಟಿದ್ದ ವಾಹನಗಳನ್ನು ಮಾರ್ಗ ಬದಲಿಸಿ ಚಾರ್ಮಾಡಿ ಘಾಟಿ ಮೂಲಕ ಕಳುಹಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

Facebook Comments

comments