LATEST NEWS
ಗ್ಯಾಸ್ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಮಂಗಳೂರು ಫೆಬ್ರವರಿ 5: ಮಂಗಳೂರು – ಬೆಂಗಳೂರು ರಾಷ್ಟೀಯ ಹೆದ್ದಾರಿಯ ಶಿರಾಡಿ ಘಾಟ್ನ ಕೆಂಪುಹೊಳೆ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನಲೆ ಗ್ಯಾಸ್ ಸೋರಿಕೆಯಾದ ಘಟನೆ ನಡೆದಿದ್ದು, ಈ ಹಿನ್ನಲೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಬಂದ್ ಮಾಡಲಾಗಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಕೆಂಪುಹೊಳೆ ಸಮೀಪ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನಲೆ ಗ್ಯಾಸ್ ಸೋರಿಕೆಯಾಗುತ್ತಿದ್ದು, ಇದರಿಂದಾಗಿ ಮಂಗಳೂರು ಬೆಂಗಳೂರು ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಬರುವ ವಾಹನವನ್ನು ಗುಂಡ್ಯ ಗೇಟ್ ಬಳಿ ತಡೆದು ನಿಲ್ಲಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿರುವ ವಾಹನವನ್ನು ಮಾರನಹಳ್ಳಿ ಗೇಟ್ ಸಮೀಪ ತಡೆದು ನಿಲ್ಲಿಸಲಾಗಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬಂದು ಮಾರ್ಗಮಧ್ಯದಲ್ಲಿರುವ ಹಲವಾರು ಜನ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಮಾಣಿ ಮೈಸೂರು ರಸ್ತೆಯಲ್ಲಿ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಗ್ಯಾಸ್ ಸೋರಿಕೆಯಾಗುತ್ತಿರುವ ಟ್ಯಾಂಕರ್ ನ್ನು ಮಂಗಳೂರಿನಿಂದ ಆಗಮಿಸಿರುವ ತಜ್ಞರ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಅನಿಲ ಟ್ಯಾಂಕರ್ ನಲ್ಲಿ ಅನಿಲ ಸೋರಿಕೆಯಾಗಿದ್ದರಿಂದ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ಮೂಲಕ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದೀಗ ಈ ರಸ್ತೆಯು ಸಂಚಾರಕ್ಕೆ ಮುಕ್ತವಾಗಿದೆ ಎಂದು ಎಸ್ಪಿ ಲಕ್ಷ್ಮಿಪ್ರಸಾದ ತಿಳಿಸಿದ್ದಾರೆ.