ಬೆಂಗಳೂರು, ನವೆಂಬರ್ 19: ನಗರದಲ್ಲಿ ಹಾಡಹಗಲೇ 7.11 ಕೋಟಿ ಹಣ ದರೋಡೆ ಮಾಡಿಕೊಂಡು ಗ್ಯಾಂಗ್ ಪರಾರಿಯಾಗಿರುವ ಘಟನೆ ನಡೆದಿದೆ.
ಇಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ಜಯದೇವ ಆಸ್ಪತ್ರೆ ಮತ್ತು ಡೇರಿ ಸರ್ಕಲ್ ನಡುವೆ ಈ ದರೋಡೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ಎಟಿಎಂಗೆ ಹಣ ತುಂಬುವ ಸಂಸ್ಥೆಯ ನೌಕರರು ಒಂದು ವ್ಯಾನ್‌ನಿಂದ ಮತ್ತೊಂದು ವಾಹನಕ್ಕೆ ಹಣವನ್ನು ವರ್ಗಾಯಿಸುತ್ತಿದ್ದರು. ಈ ಮಾಹಿತಿ ಮೊದಲೇ ತಿಳಿದಿದ್ದ ದರೋಡೆ ಗ್ಯಾಂಗ್‌ವೊಂದು ಸಿನಿಮೀಯ ರೀತಿ ಕಾರಿನಲ್ಲಿ ಸ್ಥಳಕ್ಕೆ ಬಂದು ತಾವು ಕೇಂದ್ರ ಸರ್ಕಾರದ ಟ್ಯಾಕ್ಸ್ ಆಫೀಸರ್ ಎಂದು ಹೇಳಿ 7.11 ಕೋಟಿ ಹಣವನ್ನು ದರೋಡೆ ಮಾಡಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸರು ನಗರಾದ್ಯಂತ ನಾಕಾಬಂಧಿ ಮಾಡಿ ದರೋಡೆಕೋರರು ಹಾಗೂ 7.11 ಕೋಟಿ ಹಣಕ್ಕಾಗಿ ಶೋಧ ನಡೆಸುತ್ತಿದ್ದಾರೆ. ದರೋಡೆಕೋರರ ತಂಡದಲ್ಲಿ 7ರಿಂದ 8 ಮಂದಿ ಇದ್ದರೆಂದು ತಿಳಿದುಬಂದಿದೆ.



