ತೋಟಬೆಂಗ್ರೆ ಗ್ಯಾಂಗ್ ರೇಪ್ ಪ್ರಕರಣ ಭೇಧಿಸಿದ ಪೊಲೀಸರಿಗೆ 1 ಲಕ್ಷ ರೂಪಾಯಿ ಬಹುಮಾನದ ಚೆಕ್ ಹಸ್ತಾಂತರ

ಮಂಗಳೂರು ನವೆಂಬರ್ 30: ಮಂಗಳೂರು ತೋಟಬೆಂಗ್ರೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ಮಂಗಳೂರು ಪೊಲೀಸರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ 1 ಲಕ್ಷ ರೂಪಾಯಿ ನೀಡಿ ಅಭಿನಂದಿಸಿದ್ದಾರೆ.

ಮಂಗಳೂರಿನ ತೋಟಬೆಂಗ್ರೆಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಬಂಟ್ವಾಳ ಪೊಲೀಸರು ಕೇಸು ದಾಖಲಿಸಲು ಹಿಂದೇಟು ಹಾಕಿದಾಗ, ಮಂಗಳೂರು ಪೊಲೀಸ್ ಕಮಿಷನರ್ ಸುಮೋಟೋ ಕೇಸು ದಾಖಲಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್​ನಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಅವರಿಗೆ ಸಚಿವರು ಚೆಕ್ ಹಸ್ತಾಂತರಿಸಿದರು. ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದಾಗ, ತಮಗೆ ದೂರು ಬಾರದೆ ಇದ್ದರೂ ಮಾಹಿತಿ ಸಂಗ್ರಹಿಸಿ ಸುಮೊಟೋ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಸಚಿವರು ಶ್ಲಾಘಿಸಿದರು.

ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಯುವತಿಗೂ 4.12 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಈ ಪರಿಹಾರ ನೀಡಲಾಗಿದೆ. ಅಲ್ಲದೆ ಚಾರ್ಜ್ ಶೀಟ್ ಬಳಿಕ ಮತ್ತೆ ಪರಿಹಾರ ಮೊತ್ತ ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

Facebook Comments

comments