ಬೆಲ್ಫಾಸ್ಟ್, ಏಪ್ರಿಲ್ 11: ‘ಗೇಮ್ ಆಫ್ ಥ್ರೋನ್ಸ್’ (Game of Thrones) ಸರಣಿಯ ನಟ ಹಾಗೂ ಖ್ಯಾತ ಬರಹಗಾರ ಮೈಕೆಲ್ ಪ್ಯಾಟ್ರಿಕ್ (35) ಅವರು ಮಂಗಳವಾರ (ಏಪ್ರಿಲ್ 7, 2026) ರಾತ್ರಿ ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೋಟಾರ್ ನ್ಯೂರೋನ್ ಕಾಯಿಲೆಯಿಂದ (Motor Neurone Disease – MND) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಉತ್ತರ ಐರ್ಲೆಂಡ್ನ Hospice ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಕೆಲ್, ಏಪ್ರಿಲ್ 7ರ ರಾತ್ರಿ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ನವೋಮಿ ಶೀಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಕೆಲ್ ಅವರು ತಮ್ಮ ಕಾಯಿಲೆಯ ವಿರುದ್ಧ ನಡೆಸಿದ ಹೋರಾಟ ಮತ್ತು ಈ ಕುರಿತು ಅವರು ತೋರಿದ ಧೈರ್ಯ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಮೈಕೆಲ್ ಪ್ಯಾಟ್ರಿಕ್ ಅವರು ‘ಗೇಮ್ ಆಫ್ ಥ್ರೋನ್ಸ್’ ಮಾತ್ರವಲ್ಲದೆ, ಇತ್ತೀಚಿನ ಹಿಟ್ ಸರಣಿಗಳಾದ ‘ಬ್ಲೂ ಲೈಟ್ಸ್’ (Blue Lights) ಮತ್ತು ‘ದಿಸ್ ಟೌನ್’ (This Town) ನಲ್ಲಿನ ನಟನೆಯ ಮೂಲಕ ಜನಪ್ರಿಯರಾಗಿದ್ದರು. ಕೇವಲ ನಟರಾಗಿ ಮಾತ್ರವಲ್ಲದೆ ಉತ್ತಮ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದ ಇವರು, ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರು.
ಫೆಬ್ರವರಿ 2026 ರಲ್ಲಿ ಮೈಕೆಲ್ ಅವರು ತಮ್ಮ ಕಾಯಿಲೆಯ ತೀವ್ರತೆಯ ಬಗ್ಗೆ ಮನಕಲಕುವ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಕೃತಕ ಉಸಿರಾಟದ ವ್ಯವಸ್ಥೆ ಅಥವಾ ಶಸ್ತ್ರಚಿಕಿತ್ಸೆಯ (Tracheostomy) ಮೊರೆ ಹೋಗದೆ, ನೈಸರ್ಗಿಕವಾಗಿ ಅಂತಿಮ ಕ್ಷಣಗಳನ್ನು ಎದುರಿಸುವ ಅವರ ನಿರ್ಧಾರವು ವೈದ್ಯಕೀಯ ಲೋಕದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು.