ಗಜ ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಪ್ರಕ್ಷುಬ್ದಗೊಂಡ ಕಡಲು ಭಾರಿ ಮಳೆ ಸಾಧ್ಯತೆ

ಮಂಗಳೂರು ನವೆಂಬರ್ 18: ಈಗಾಗಲೇ ತಮಿಳುನಾಡಿನಲ್ಲಿ ಭಾರಿ ಅನಾಹುತ ಸೃಷ್ಠಿಸಿರುವ ಗಜ ಚಂಡಮಾರುತ ಈಗ ಕರ್ನಾಟಕದ ಕರಾವಳಿಯತ್ತ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಮುದ್ರ ಪ್ರಕ್ಷುಬ್ದಗೊಳ್ಳಲಿರುವ ಸಾಧ್ಯತೆ ಇರುವುದರಿಂದ ನವೆಂಬರ್ 21 ರವರೆಗೆ ಮೀನುಗಾರರು ಕಡಲಿಗೆ ಇಳಿಯದಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿದ್ದ ಗಜ ಚಂಡಮಾರುತ ತಮಿಳುನಾಡಿನಲ್ಲಿ ಸಾಕಷ್ಟು ಹಾನಿಯುಂಟು ಮಾಡಿದೆ. ಗಜ ಚಂಡ ಮಾರುತ ಈಗ ಅರಬ್ಬೀ ಸಮುದ್ರತ್ತ ಸಾಗುತ್ತಿದ್ದು, ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪ ಪ್ರದೇಶದ ಮೀನುಗಾರರು ನ.17ರಿಂದ 21ರ ವರೆಗೆ ಸಮುದ್ರಕ್ಕಿಳಿದಂತೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಗಜ ಚಂಡಮಾರುತ ಅರಬ್ಬೀ ಸಮುದ್ರ ಕಡೆಗೆ ಸಾಗುತ್ತಿದ್ದು ಈ ನಡುವೆ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರದಲ್ಲಿ ನವೆಂಬರ್ 19ರಿಂದ 23ರ ವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಸಮುದ್ರ ಪ್ರಕ್ಷಬ್ಧಗೊಂಡಿದ್ದು, ನವೆಂಬರ್ 17ರಂದು ಮಂಗಳೂರಿನಿಂದ ಕಾರವಾದವರೆಗೆ ಸಮುದ್ರದಲ್ಲಿ ಸಂಜೆ 5.30ರಿಂದ ರಾತ್ರಿ 11.30ರ ವರೆಗೆ 2 ಮೀಟರ್‌ನಿಂದ 2.6 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಗಳಿವೆ.

ಸಮುದ್ರದಲ್ಲಿ ಪ್ರತಿ ಸೆಕೆಂಡಿಗೆ 32ರಿಂದ 79 ಕಿಮೀ. ವೇಗದಲ್ಲಿ ಗಾಳಿ ಬೀಸಲಿದೆ. ನ.18ರಂದು ಅರಬ್ಬೀ ಸಮುದ್ರದ ಆಗ್ನೇಯ ಹಾಗೂ ಬಂಗಾಳ ಕೊಲ್ಲಿ ಮಧ್ಯ ಭಾಗದಿಂದ ಗಂಟೆಗೆ 75-85 ಕಿಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ.

ನ.19ರಂದು ಅರಬ್ಬೀ ಸಮುದ್ರದ ಆಗ್ನೇಯ ದಿಕ್ಕಿನಿಂದ ನೈಋತ್ಯ ಕಡೆಗೆ ಮತ್ತು ನ. 20 ಮತ್ತು 21ರಂದು ಅರಬ್ಬೀ ಸಮುದ್ರದ ಆಗ್ನೇಯ ಹಾಗೂ ಬಂಗಾಳ ಕೊಲ್ಲಿಯ ನೈಋತ್ಯ ದಿಕ್ಕಿನಿಂದ ಗಂಟೆಗೆ 40-50 ಕಿಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

4 Shares

Facebook Comments

comments