ಯಾದಗಿರಿ, ಮಾರ್ಚ್ 29: ಶಾಲೆಗೆ ರಜೆ ಇದ್ದ ಕಾರಣ ಸಂಭ್ರಮದಿಂದ ಈಜಲು ಹೋಗಿದ್ದ ನಾಲ್ವರು ಪುಟ್ಟ ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಅತ್ಯಂತ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಮಾರ್ಚ್. 29 ರಂದು ನಡೆದಿದೆ.

ಮೃತರನ್ನು ಕಿರಣ್ (6), ಬಸಮ್ಮ (11), ಶರತ್ (6) ಹಾಗೂ ಹನುಮೇಶ್ (7) ಎಂದು ಗುರುತಿಸಲಾಗಿದೆ. ಈ ನಾಲ್ವರೂ ಮಕ್ಕಳು ನಗನೂರು ಗ್ರಾಮದ ನಿವಾಸಿಗಳಾಗಿದ್ದು, ಭಾನುವಾರ ಶಾಲಾ ರಜೆ ಇದ್ದ ಹಿನ್ನೆಲೆಯಲ್ಲಿ ಗ್ರಾಮದ ಹೊರವಲಯದಲ್ಲಿರುವ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದರು ಎನ್ನಲಾಗಿದೆ.
ನೀರಿನ ಆಳದ ಅರಿವಿಲ್ಲದೆ ಹೊಂಡಕ್ಕೆ ಇಳಿದ ಮಕ್ಕಳು ಒಬ್ಬರನ್ನೊಬ್ಬರು ಉಳಿಸಲು ಹೋಗಿ ನಾಲ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರು ಹಾಗೂ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದು, ಮಕ್ಕಳ ಶವಗಳನ್ನು ನೋಡಿ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದ ಹೆತ್ತವರು ಅಕ್ಷರಶಃ ಕಂಗಾಲಾಗಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.