ಕೊಲ್ಲಂ ಮಾರ್ಚ್ 14: ಕುಖ್ಯಾತ ಪಾತಕಿ ಅಲುವಾ ಅತುಲ್ನನ್ನು ಹಾಡಹಗಲೇ ಸಿನಿಮಾ ಮಾದರಿಯಲ್ಲಿ ಕೊಚ್ಚಿ ಕೊಂದಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ನೌಫಲ್, ಫೈಸಲ್, ಫಿನಿಲ್ ಪೀಟರ್, ಶಮ್ನಾದ್ (ಕಾರು ಚಾಲಕ) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಶನಿವಾರ ಅಲುವಾ ಅತುಲ್ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆರೋಪಿಗಳು ಇನ್ನೋವಾ ಕಾರಿನಲ್ಲಿ ಬಂದು ಅತುಲ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಅತುಲ್ ಅವರ ಕಾರು ರಾಷ್ಟ್ರೀಯ ಹೆದ್ದಾರಿಯ ಅಗೆದ ಭಾಗಕ್ಕೆ ಬಿದ್ದಿದೆ. ಈ ವೇಳೆ ಕಾರಿನಿಂದ ಇಳಿದ ಹಂತಕರು ಹರಿತವಾದ ಆಯುಧಗಳಿಂದ ಅತುಲ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಅತುಲ್ ಜೊತೆಗಿದ್ದ ಮನು ಎಂಬುವವರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ತನಿಖೆಯ ಪ್ರಕಾರ, ಇದು ಸಂಪೂರ್ಣವಾಗಿ ಸೇಡಿನ ಕೃತ್ಯವಾಗಿದೆ. 2025ರ ಮಾರ್ಚ್ 27ರಂದು ಕರುಣಗಪ್ಪಲ್ಲಿಯ ಜಿಮ್ ಮಾಲೀಕ ಸಂತೋಷ್ ಅವರನ್ನು ಅತುಲ್ ಮತ್ತು ತಂಡ ಮನೆಯಲ್ಲೇ ಕೊಚ್ಚಿ ಕೊಂದಿತ್ತು. ಬಳಿಕ ಜಿಮ್ ಸಂತೋಷ್ ಹತ್ಯೆಯಾದ ದಿನವೇ ಅತುಲ್ ‘ಅನೀರ್’ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದ. ಈಗ ಬಂಧಿತರಾಗಿರುವವರು ಅನೀರ್ನ ‘ಕಾಡತ್ತೂರ್ ಗ್ಯಾಂಗ್’ ಸದಸ್ಯರಾಗಿದ್ದಾರೆ. ಸಂತೋಷ್ ಕೊಲೆ ಪ್ರಕರಣದಲ್ಲಿ ಮಾರ್ಚ್ 12ರಂದು ಜಾಮೀನು ಪಡೆದು ಅತುಲ್ ಹೊರಬಂದಿದ್ದ. ಶನಿವಾರ ಪೊಲೀಸ್ ಠಾಣೆಗೆ ಸಹಿ ಹಾಕಲು ಬಂದಿದ್ದ ಅತುಲ್ನನ್ನು ಹೊಂಚು ಹಾಕಿ ಹತ್ಯೆ ಮಾಡಲಾಗಿದೆ. ಸಿನೆಮಾ ಮಾದರಿಯಲ್ಲಿ ನಡೆದ ಕೊಲೆ ಇಡೀ ಕೇರಳವನ್ನೇ ಬೆಚ್ಚಿಬಿಳಿಸಿದೆ.