ಮುಂಬೈ,ಮಾರ್ಚ್ 29: ಭಾರತದ ಪ್ರತಿಷ್ಠಿತ ‘ರೇಮಂಡ್ ಗ್ರೂಪ್’ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಮಾಜಿ ಅಧ್ಯಕ್ಷ, ಪದ್ಮಭೂಷಣ ಪುರಸ್ಕೃತ ವಿಜಯಪತ್ ಸಿಂಘಾನಿಯಾ (87) ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ.

ಕೇವಲ ಉದ್ಯಮಿಯಷ್ಟೇ ಅಲ್ಲದೆ, ಸಾಹಸಪ್ರಿಯ ಪೈಲಟ್ ಮತ್ತು ಲೇಖಕರಾಗಿಯೂ ಗುರುತಿಸಿಕೊಂಡಿದ್ದ ಸಿಂಘಾನಿಯಾ ಅವರ ನಿರ್ಗಮನದೊಂದಿಗೆ ಭಾರತೀಯ ಉದ್ಯಮ ರಂಗದ ಒಂದು ಸುದೀರ್ಘ ಅಧ್ಯಾಯ ಅಂತ್ಯಗೊಂಡಂತಾಗಿದೆ.
1980ರಿಂದ 2000ದ ದಶಕದವರೆಗೆ ರೇಮಂಡ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಇವರು, ಸಣ್ಣ ಮಟ್ಟದಲ್ಲಿದ್ದ ಕಂಪನಿಯನ್ನು ವಿಶ್ವದ ಅತಿದೊಡ್ಡ ಸೂಟಿಂಗ್ ಬಟ್ಟೆ ತಯಾರಿಕಾ ಸಂಸ್ಥೆಯನ್ನಾಗಿ ಬೆಳೆಸಿದರು. ‘ದ ಕಂಪ್ಲೀಟ್ ಮ್ಯಾನ್’ ಎಂಬ ಬ್ರ್ಯಾಂಡ್ ಪರಿಕಲ್ಪನೆಯ ಮೂಲಕ ರೇಮಂಡ್ ಸಂಸ್ಥೆಯನ್ನು ಪ್ರತಿಯೊಬ್ಬ ಭಾರತೀಯನ ಮನೆಯ ಮಾತಾಗುವಂತೆ ಮಾಡುವಲ್ಲಿ ಇವರ ದೂರದೃಷ್ಟಿ ಅಡಗಿತ್ತು.
ಉದ್ಯಮದ ಜೊತೆಗೆ ವಾಯುಯಾನದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಇವರು 1988ರಲ್ಲಿ ಲಂಡನ್ನಿಂದ ಮುಂಬೈವರೆಗೆ ಸುಮಾರು 5,000 ಮೈಲುಗಳ ದೂರವನ್ನು ಏಕಾಂಗಿಯಾಗಿ ವಿಮಾನ ಚಲಾಯಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. 2005ರಲ್ಲಿ ಸಮುದ್ರ ಮಟ್ಟದಿಂದ 69,852 ಅಡಿ ಎತ್ತರದಲ್ಲಿ ಹಾಟ್ ಏರ್ ಬಲೂನ್ ಹಾರಿಸಿ ವಿಶ್ವ ದಾಖಲೆ ಬರೆದಿದ್ದರು. ಇವರ ಸಾಹಸವನ್ನು ಪರಿಗಣಿಸಿ ಭಾರತೀಯ ವಾಯುಪಡೆಯು ಇವರಿಗೆ ‘ಗೌರವಾನ್ವಿತ ಏರ್ ಕೊಮೊಡೋರ್’ ಪದವಿ ನೀಡಿ ಗೌರವಿಸಿತ್ತು.
ವೃತ್ತಿಜೀವನದಲ್ಲಿ ಅತ್ಯುನ್ನತ ಶಿಖರಕ್ಕೇರಿದ್ದ ಸಿಂಘಾನಿಯಾ ಅವರು, ಜೀವನದ ಸಂಧ್ಯಾಕಾಲದಲ್ಲಿ ತಮ್ಮ ಮಗ ಗೌತಮ್ ಸಿಂಘಾನಿಯಾ ಅವರೊಂದಿಗಿನ ಆಸ್ತಿ ವಿವಾದ ಮತ್ತು ಕಾನೂನು ಹೋರಾಟದ ಕಾರಣದಿಂದಾಗಿ ಸುದ್ದಿಯಾಗಿದ್ದರು. ಈ ನೋವಿನ ಕಥೆಯನ್ನು ಅವರು ತಮ್ಮ ಆತ್ಮಚರಿತ್ರೆ ‘ಆನ್ ಆನ್ ಇನ್ ಕಂಪ್ಲೀಟ್ ಲೈಫ್’ (An Incomplete Life) ಪುಸ್ತಕದಲ್ಲಿ ದಾಖಲಿಸಿದ್ದರು. ಮೃತರಿಗೆ ಇಡೀ ಉದ್ಯಮ ಲೋಕ ಕಂಬನಿ ಮಿಡಿದಿದೆ.