BELTHANGADI
ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ
ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ
ಬೆಳ್ತಂಗಡಿ ಜೂನ್ 18: ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ತಂಗಡಿಗೆ ಭಾನುವಾರ ಭೇಟಿ ನೀಡಿದ್ದಾರೆ.
ಚುನಾವಣೆಯ ಅಬ್ಬರ, ಪ್ರಚಾರ ಹಾಗೂ ನಂತರದ ರಾಜಕೀಯ ಜಗ್ಗಾಟದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಧರ್ಮಸ್ಥಳ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ದಾಖಲಾಗಿರುವ ಅವರು ಭಾನುವಾರದಿಂದ ಶಾಂತಿವನದ ಸಾಧಕರಲ್ಲೊಬ್ಬರಾಗಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿನ ಎಸ್’ಡಿಎಂ ಪ್ರಕೃತಿ ಚಿಕಿತ್ಸಾಲಕ್ಕೆ ಸಿದ್ದರಾಮಯ್ಯ ಅವರು ದಾಖಲಾಗಿದ್ದು, 12 ದಿನಗಳ ಕಾಲ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ.
ವಿವಿಧ ಚಿಕಿತ್ಸೆಯನ್ನು ಪಡೆಯಲು ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಶಾಂತಿವನಕ್ಕೆ ಶನಿವಾರ ರಾತ್ರಿ 10 ಗಂಟೆಗೆ ತಲುಪಿದರು. ಶಾಂತಿವನದಲ್ಲಿ ಅವರು ಸುಮಾರು 10-15 ದಿನಗಳ ಕಾಲ ಉಳಿದುಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ಈ ವೇಳೆ ಸಿದ್ದರಾಮಯ್ಯ ಅವರು ಅಲ್ಲಿನ ಎಣ್ಣೆಮರ್ದನ, ಪೃಥ್ವಿ (ಮಡ್) ಚಿಕಿತ್ಸೆ, ಹಬೆ ಸ್ನಾನ, ಫಿಸಿಯೋಥೆರಪಿ, ಆ್ಯಂಕ್ಚುಪಂಕ್ಚರ್, ಜಲ ಚಿಕಿತ್ಸೆ, ಆಕಾಶ ಚಿಕಿತ್ಸೆ, ವಾಯು ಚಿಕಿತ್ಸೆ, ಸೂರ್ಯ/ಅಗ್ನಿ ಚಿಕಿತ್ಸೆ, ಅಯಸ್ತಾಂಕ ಚಿಕಿತ್ಸೆ, ಯೋಗ ಥೆರಪಿ, ಡಯಟ್ ಥೆರಪಿ, ಧ್ಯಾನ ಪ್ರಾಣಾಯಾಮ ಮೊದಲಾದ ಚಿಕಿತ್ಸೆಗಳನ್ನು ಪಡೆಯಲಿದ್ದಾರೆ.
ಜೂನ್ 21ರಂದು ಧರ್ಮಸ್ಥಳದಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆಯಂದು ಅವರು ಅತಿಥಿಗಳಾಗಿರುತ್ತಾರೆಂದು ಹೇಳಲಾಗುತ್ತಿದೆ. ಚಿಕಿತ್ಸೆ ಪಡೆದು ಮತ್ತೆ ಮರಳಿ ಬೆಂಗಳೂರಿಗೆ ಹೋಗುವ ಮುನ್ನಾದಿನ ಅವರು ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.