ಮರ ಕಡಿಯಲು ಅನುಮತಿಗಾಗಿ ಲಂಚ ಸ್ವೀಕಾರ – ಅರಣ್ಯ ರಕ್ಷಕ ಎಸಿಬಿ ಬಲೆಗೆ

ಉಪ್ಪಿನಂಗಡಿ ಜನವರಿ 9: ಖಾಸಗಿ ಜಾಗದಲ್ಲಿದ್ದ ಮರವೊಂದನ್ನು ಕಡಿಯಲು 15 ಸಾವಿರ ಲಂಚ ಬೇಡಿಕೆ ಇಟ್ಟಿದ್ದ ಅರಣ್ಯ ರಕ್ಷಕನನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಲಂಚ ಸ್ವೀಕರಿಸಿದ ಉಪ್ಪಿನಂಗಡಿ ವಲಯ ಅರಣ್ಯ ರಕ್ಷಕನನ್ನು ಸುಧೀರ್ ಎಂದು ಗುರುತಿಸಲಾಗಿದೆ. ಉರುವಾಲಿನ ನಿವಾಸಿ ಸಿದ್ದಿಕ್ ಎಂಬವರು ಖಾಸಗಿ ಒಡೆತನದ ಭೂಮಿಯಲ್ಲಿರುವ ಮರ ಕಡಿಲು ಅರಣ್ಯ ಇಲಾಖೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಲೇವಾರಿಗಾಗಿ ಅರಣ್ಯ ರಕ್ಷಕ ಸುಧೀರ್ 15 ಸಾವಿರ ರೂಪಾಯಿಗಳ ಲಂಚ ನೀಡಬೇಕೆಂದು ಒತ್ತಾಯಿಸಿದ್ದರು.

ಈ ಹಿನ್ನಲೆಯಲ್ಲಿ ಸಿದ್ದಿಕ್ ಅವರು 10 ಸಾವಿರ ಲಂಚವನ್ನು ಪಾವತಿಸಿದ್ದು , ಉಳಿದ 3 ಸಾವಿರ ಹಣವನ್ನು ಬುಧವಾರ ನೀಡುವುದಾಗಿ ಹೇಳಿದ್ದರು. ಈ ಹಿನ್ನಲೆ ಲಂಚಕ್ಕೆ ಸಂಬಂಧಿಸಿದಂತೆ ಎಸಿಬಿ ಗಮನಕ್ಕೆ ತಂದಿದ್ದರು. ಅದರನ್ವಯ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಅರಣ್ಯ ರಕ್ಷಕ ಸುಧೀರ್ ಸಿದ್ದಿಕ್ ಅವರಿಂದ ಹಣ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ.