ತಿಥಿಗಾಗಿ ಸಾಕಿದ್ದ ಕಾಗೆಯನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು

ಮಂಗಳೂರು ಜುಲೈ 13 : ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ ಪ್ರಶಾತ್ ಪೂಜಾರಿ ಅವರ ಕಾಗೆ ಯೋಜನೆಗೆ ಅರಣ್ಯ ಇಲಾಖೆಯವರು ನೀರು ಬಿಟ್ಟಿದ್ದು, ತಿಥಿ ಸಂಸ್ಕಾರ ಸಮಯದಲ್ಲಿ ಉಪಯೋಗಕ್ಕಾಗಿ ಸಾಕಿದ ಕಾಗೆಯನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಕಾಡಿಗೆ ಬಿಟ್ಟಿದ್ದಾರೆ.

ಉತ್ತರ ಕ್ರಿಯೆ ಶ್ರಾದ್ದ ಸಂದರ್ಭದಲ್ಲಿ ವಾಯಸ ಬಲಿ ನೀಡುವ ಉದ್ದೇಶಕ್ಕೆ ಕಾಪುವಿನ ಪ್ರಶಾಂತ್ ಎಂಬುವರು ಕಾಗೆಯನ್ನು ಸಾಕಿದ್ದರು. ಅಲ್ಲದೆ ಕಾಗೆ ಸಂತತಿ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಅಪರ ಸಂಸ್ಕಾರ ಇದ್ದಲ್ಲಿಗೆ ಕಾಗೆಯನ್ನು ಉಚಿತವಾಗಿ ಕಳುಹಿಸಿಕೊಡಲಾಗುವುದು ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿದ್ದರು.

ಪ್ರಶಾಂತ್ ಅವರ ಈ ಯೋಜನೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಆದರೆ ಪ್ರಶಾಂತ್ ಅವರ ಈ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಸುದ್ದಿ ಪ್ರಾಣಿ ದಯಾ ಸಂಘಟನೆಗಳಿಗೆ ಮುಟ್ಟಿದ್ದು ಅವರು ರಾಜ್ಯದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಈ ಕುರಿತಂತೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಹಿನ್ನಲೆಯಲ್ಲಿ ಉಡುಪಿ ವಲಯ ಅರಣ್ಯಾಧಿಕಾರಿ ಗಳ ಆದೇಶದ ಮೇರೆಗೆ ಕಾಪು ಅರಣ್ಯಾಧಿಕಾರಿಗಳು ಪ್ರಶಾಂತ್ ಮನೆಗೆ ತೆರಳಿ ಕಾಗೆಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಶಕ್ಕೆ ಪಡೆದ ಕಾಗೆಯನ್ನು ಕಾಡಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿ ಕಾಗೆ ಬರುವುದಿಲ್ಲವಾದರೂ ಮನೆಯಲ್ಲಿ ಕಾಗೆಯನ್ನು ಸಾಕುವುದಕ್ಕೆ ನಿಷೇಧವಿದೆ ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಗೆಯನ್ನು ವಶಕ್ಕೆ ಪಡೆದು ಕಾಡಿನಲ್ಲಿ ಬಿಟ್ಟಿದ್ದಾರೆ.

Facebook Comments

comments