ಕಾರ್ಕಳ, ನವೆಂಬರ್ 28: ಹೆಬ್ರಿ, ಕಾರ್ಕಳ ಗಡಿಭಾಗದ ಪಡುಕುಡೂರು ಪ್ರದೇಶದ ತಿಮ್ಮಪ್ಪ ಪುಜಾರಿ ಅವರ ಮನೆಯ ಸಮೀಪ ಆಹಾರಕ್ಕಾಗಿ ಬಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಮನೆಗೆ ಹೊಂದಿಕೊಂಡಿದ್ದ ಹೊರಭಾಗದ ಕೊಠಡಿಯೊಂದರ ಸಮೀಪ ಆಹಾರಕ್ಕಾಗಿ ಹೊಂಚು ಹಾಕಿ ಚಿರತೆ ಕುಳಿತುಕೊಂಡಿತ್ತು. ಶಬ್ಧ ಗಮನಿಸಿ ದೂರದಿಂದಲೇ ಚಿರತೆ ಇರುವುದು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಇಲಾಖೆ ಸಿಬಂದಿ ಸ್ಥಳಕ್ಕೆ ಧಾವಿಸಿ ಬೋನ್ ಸಹಿತ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಎರಡು ಗಂಟೆಗಳ ಜಾಗರೂಕ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಸುರಕ್ಷಿತವಾಗಿ ಬೋನಿನಲ್ಲಿ ಸೆರೆಹಿಡಿದು ಕಾಡಿಗೆ ಬಿಟ್ಟರು.
ಸೆರೆಯಾದ ಚಿರತೆ ಸುಮಾರು ಮೂರು ವರ್ಷ ವಯಸ್ಸಿನದು ಎಂದು ಅರಣ್ಯ ಇಲಾಖೆ ತಿಳಿಸಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಚಿರತೆಯನ್ನು ಸುರಕ್ಷಿತ ಅರಣ್ಯ ವ್ಯಾಪ್ತಿಗೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿಗಳಾದ ಕರುಕರ ಅಚಾರ್ಯ, ಚಂದ್ರಕಾಂತ್ ಪೋಳ್, ರೋಹಿಣಿ, ಗಸ್ತು ಅರಣ್ಯಪಾಲಕರು, ಸ್ಥಳೀಯರು ಭಾಗವಹಿಸಿದ್ದರು.



