ಪ್ಲ್ಯಾಶ್ ಮಾಬ್ ನಿಂದ ಡೆಂಗ್ಯೂ ಜಾಗೃತಿ ಸಾಧ್ಯನಾ ……?

ಮಂಗಳೂರು ಜುಲೈ 27: ಡೆಂಗ್ಯೂನಿಂದ ಜಿಲ್ಲೆಯಲ್ಲಿ ಅಧಿಕೃತವಾಗಿ ಮೂರು ಸಾವು ಸಂಭವಿಸಿದ್ದರು, ಬಾಲಿವುಡ್ ಹಾಡಿಗೆ ಮಾಲ್ ಗಳಲ್ಲಿ ಪ್ಲ್ಯಾಶ್ ಮಾಬ್ ನಡೆಸಿ ಡೆಂಗ್ಯೂ ಜಾಗೃತಿ ಮೂಡಿಸಲು ಮುಂದಾದ ದಕ್ಷಿಣಕನ್ನಡ ಜಿಲ್ಲಾಡಳಿತ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದ್ದು, ಡೆಂಗ್ಯೂ ಪ್ರಕರಣ ಹತೋಟಿಗೆ ತರಲು ಜಿಲ್ಲಾಡಳಿತ ಹೆಣಗಾಡುತ್ತಿದೆ. ಈ ನಡುವೆ ಜನಸಾಮಾನ್ಯರಿಗೆ ಡೆಂಗ್ಯೂ ಜಾಗೃತಿಗೆ ಮಾಲ್ ಗಳಲ್ಲಿ ಫ್ಲ್ಯಾಶ್ ಮಾಬ್ ಅಭಿಯಾನ ನಡೆಸಿ ಮುಜುಗರಕ್ಕೊಳಗಾದ ಘಟನೆ ನಡೆದಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗ ಸಾಮಾನ್ಯ ಜ್ವರ ಬಂದರೆ ಕೂಡ ಈಗ ಭಯಭೀತರಾಗಿ ಆಸ್ಪತ್ರೆಗೆ ದೌಡಾಯಿಸುವ ಪರಿಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಮಹಾಮಾರಿ ಈಗಾಗಲೇ 3 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅಲ್ಲದೆ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಈ ನಡುವೆ ಜಿಲ್ಲಾಡಳಿತ ಡೆಂಗ್ಯೂ ಜಾಗೃತಿಗಾಗಿ ಇಂದು ಡೆಂಗ್ಯೂ ಡ್ರೈವ್ ಡೆ ಆಯೋಜಿಸಿತ್ತು. ಡೆಂಗ್ಯೂ ಜಾಗೃತಿಗಾಗಿ ಸಾರ್ವಜನಿಕರಲ್ಲಿ ಪರಿಸರ ಸ್ವಚ್ಚವಾಗಿ ಇಟ್ಟಕೊಳ್ಳಲು ಮನವಿ ಮಾಡಲಾಯಿತು.

ಆದರೆ ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಮಾಲ್ ಗಳಲ್ಲಿ ಫ್ಲ್ಯಾಶ್ ಮಾಬ್ ಮಾತ್ರ ಅಭಿಯಾನಕ್ಕೆ ಕಪ್ಪು ಚುಕ್ಕೆಯಾಯಿತು.
ಡೆಂಗ್ಯೂ ನಿಂದ ಸಾವು ಸಂಭವಿಸುತ್ತಿದ್ದು ಇಂತಹ ಗಂಭೀರ ವಿಚಾರ ವನ್ನು ಜಿಲ್ಲಾಡಳಿತ ಹಗುರವಾಗಿ ಪರಿಗಣಿಸಿ ಸಂಭ್ರಮಿಸಿದ್ದು ಟೀಕೆಗೆ ಗುರಿಯಾಗಿದೆ. ಫ್ಲ್ಯಾಶ್ ಮಾಬ್ ಹೆಸರಿನಲ್ಲಿ ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿಗಳು ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಅದಲ್ಲದೇ ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಡೆಂಗ್ಯೂ ಪಾಪ್ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಈ ಮೂಲಕ ಡೆಂಗ್ಯೂ ಬಗ್ಗೆ ಯಾವರೀತಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು ಎನ್ನುವುದನ್ನು ಜಿಲ್ಲಾಧಿಕಾರಿಗಳೇ ವಿವರಿಸಬೇಕು.

ಕೇವಲ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡುವುದರಿಂದ ಡೆಂಗ್ಯೂ ಬಗ್ಗೆ ಜಾಗೃತಿ ಮೂಡುವುದಾದರೂ ಹೇಗೆ ಎನ್ನುವ ಪ್ರಶ್ನೆ ನೆರೆದವರಲ್ಲಿ ಮೂಡಿದೆ. ಅಟ್ಲೀಸ್ಟ್ ಡೆಂಗ್ಯೂ ಮಾಹಾಮಾರಿ ಬಗ್ಗೆ ಅಥವಾ ಸ್ವಚ್ಛತೆಯ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿದ್ದರೂ ಅದಕ್ಕೊಂದು ಅರ್ಥ ಇರುತ್ತಿತ್ತು. ಆದರೆ ಡೆಂಗ್ಯೂ ನಂತಹ ಅತ್ಯಂತ ಗಂಭೀರ ವಿಚಾರವನ್ನು ಜಿಲ್ಲಾಡಳಿತ ಲೈಟ್ ಆಗಿ ತೆಗೆದು ಕೊಂಡಿದೆ. ಜಾಗೃತಿ ಹೆಸರಿನಲ್ಲಿ ದುಂದುವೆಚ್ಚ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಫ್ಲಾಶ್ ಮಾಬ್ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಗೂ ಡೆಂಗ್ಯೂ ನ ಗಂಭೀರತೆಯ ಬಗ್ಗೆ ಅರಿವಿದ್ದಂತಿಲ್ಲ. ಡೆಂಗ್ಯೂ ಜ್ವರಕ್ಕೆ ತುತ್ತಾಗಿ ತಮ್ಮವರನ್ನು ಕಳೆದುಕೊಂಡ ಕುಡುಂಬಗಳಿಗೆ ಈ ಮೂಲಕ ಅವಮಾನ ಮಾಡಿದಂತಾಗಿದೆ.

ಡೆಂಗ್ಯೂ ಹಾವಳಿಯನ್ನು ಜಿಲ್ಲೆಯಿಂದ ನಿರ್ಮೂಲನೆ ಮಾಡಲು ಟೊಂಕ ಕಟ್ಟಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಈ ಫ್ಲ್ಯಾಶ್ ಮಾಬ್ ಕಾರ್ಯಕ್ರಮಕ್ಕೆ ಸಹಮತಿ ನೀಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ. ಪ್ಲ್ಯಾಶ್ ಮಾಬ್ ಡ್ಯಾನ್ಸ್ ಮಾಲ್ ಗಳಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿದೆಯೋ ಗೊತ್ತಿಲ್ಲ ಆದರೆ ಮಾಲ್ ಗಳಿಗೆ ಶಾಪಿಂಗ್ ಗೆ ಬಂದವರಿಗೆ ಮನೋರಂಜನೆ ನೀಡಿದ್ದಂತು ನಿಜ.

VIDEO

Facebook Comments

comments