ಬೆಂಗಳೂರು, ಫೆಬ್ರವರಿ 15: ಕಳೆದ ಎರಡು ದಿನಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಯುವಕರು ಸಾವನಪ್ಪಿದ್ದರು, ಆ ಘಟನೆ ಇನ್ನು ಮಾಸುವ ಮುನ್ನವೇ ಇದೀಗ ಮತ್ತೊಂದು ಘೋರ ಅಪಘಾತದ ನಡೆದಿದ್ದು, ನೆಲಮಂಗಲ ಜಿಂದಾಲ್ ಬಳಿ KSRTC ಬಸ್​​ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಐವರು ಯುವಕರು ಸಾವನಪ್ಪಿದ ಘಟನೆ ನಡೆದಿದೆ.


ಇಂಡಿಕಾ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದು, ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಹಾಗೂ ಲಲಿತ್​(22) ಮೃತ ದುರ್ದೈವಿಗಳಾಗಿದ್ದಾರೆ. ತುಮಕೂರು ಕಡೆಯಿಂದ ಬರುತ್ತಿದ್ದ ಕಾರು ಡಿವೈಡರ್​​ ಜಂಪ್ ಮಾಡಿ ಬೆಂಗಳೂರು ಕಡೆಯಿಂದ ಹೊರಟಿದ್ದ KSRTC ಬಸ್​ಗೆ ಡಿಕ್ಕಿಯಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಐವರ ಮೃತದೇಹ ರವಾನೆ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


ಮೃತ ಹರ್ಷಿತ್​​ ರಾಜನಕುಂಟೆ ಸಾಯಿ ವಿದ್ಯಾ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಮತ್ತೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತನೂ ಪ್ರಾಣ ಬಿಟ್ಟಿದ್ದಾನೆ.

ಇನ್ನು ಮೃತ ಹರ್ಷಿತ್​​ ರಾತ್ರಿ 8.30ರ ವರೆಗೂ ಮನೆಯಲ್ಲಿಯೇ ಇದ್ದ. ಬಳಿಕ ಸ್ನೇಹಿತನ ಭೇಟಿ ಮಾಡಿ ಬಂದ್ಬಿಡ್ತೀನಿ ಅಂತ ಮನೆಯಿಂದ ಹೊರ ಬಂದಿದ್ದ. ತುಮಕೂರು ಕಡೆಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಐವರು ಬರುತ್ತಿದ್ದಾಗ ಅಪಘಾತ ನಡೆದಿದ್ದು, ಕಾರು ಗುದ್ದಿದ ಪರಿಣಾಮ ಬಸ್​​ ಮುಂಭಾಗ ಜಖಂ ಆಗಿದ್ದರೆ, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಮುಂಭಾಗ ಮೃತ ಹರ್ಷಿತ್​​ ತಾಯಿಯ ಗೋಳಾಟ ಕರುಳು ಹಿಂಡುವಂತಿದ್ದು, ಮಗನ ಮೃತದೇಹ‌ ತಬ್ಬಿ ಕಣ್ಣೀರು ಹಾಕಿದ್ದಾರೆ.

Share Information