ಒಡಿಶಾ, ಮಾರ್ಚ್ 29: ಪ್ರವಾಸಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಚಾಲಕ ಸೇರಿದಂತೆ ಐವರು ಪ್ರಯಾಣಿಕರು ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಒಡಿಶಾದ ನಯಾಗಢ ಜಿಲ್ಲೆಯ ದಸಪಲ್ಲಾ ಸಮೀಪದ ಹನುಮಾನ್ ಘಾಟಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

ಗಂಜಾಂ ಜಿಲ್ಲೆಯ ಬೆರ್ಹಾಂಪುರದ ನಿವಾಸಿಗಳಾದ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರು ಬೋಲಾಂಗೀರ್ ಜಿಲ್ಲೆಯ ಹರಿಶಂಕರ್ ದೇವಸ್ಥಾನಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು. ಶನಿವಾರ ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ಬಸ್ ಹನುಮಾನ್ ಘಾಟಿ ರಸ್ತೆಯ ತಿರುವಿನಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅತಿ ವೇಗ ಮತ್ತು ಮುಂಜಾನೆಯ ದಟ್ಟ ಮಂಜು ಈ ದುರ್ಘಟನೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಭೀಕರ ಅಪಘಾತದಲ್ಲಿ ಬಸ್ ಚಾಲಕ ಪ್ರವೀಣ್ ಸಾಹು ಹಾಗೂ ನಾಲ್ವರು ಮಹಿಳಾ ಪ್ರಯಾಣಿಕರಾದ ಹರಿ ಪಾತ್ರ, ಲಕ್ಷ್ಮಿ ಪಾತ್ರ, ಸುಪ್ರಭಾ ಸಾಹು ಮತ್ತು ಸುಮತಿ ಸಾಹು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಬಸ್ಸಿನೊಳಗೆ ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಗ್ಯಾಸ್ ಕಟರ್ಗಳನ್ನು ಬಳಸಿ ಬಸ್ಸಿನ ಭಾಗಗಳನ್ನು ಕತ್ತರಿಸಿ ಗಾಯಾಳುಗಳನ್ನು ಹೊರತೆಗೆದಿದ್ದಾರೆ.
ಗಾಯಗೊಂಡ 30ಕ್ಕೂ ಹೆಚ್ಚು ಜನರನ್ನು ನಯಾಗಢ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 15 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್ (AIIMS) ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.