Connect with us

LATEST NEWS

ತೆರಿಗೆ ಅಧಿಕಾರಿಗಳ ಕಿರುಕುಳಕ್ಕೆ ಬಾಗಿಲು ಮುಚ್ಚಿದ ಮೀನುಗಾರಿಕಾ ಉದ್ಯಮ : ಬೀದಿಪಾಲಾದ ಕಾರ್ಮಿಕರು

ತೆರಿಗೆ ಅಧಿಕಾರಿಗಳ ಕಿರುಕುಳಕ್ಕೆ ಬಾಗಿಲು ಮುಚ್ಚಿದ ಮೀನುಗಾರಿಕಾ ಉದ್ಯಮ ಬೀದಿಪಾಲಾದ ಕಾರ್ಮಿಕರು

ಮಂಗಳೂರು ಅಗಸ್ಟ್ 23: ಮತ್ಯೋಧ್ಯಮಕ್ಕೆ ಹೆಸರುವಾಸಿಯಾದ ಕರಾವಳಿಯಲ್ಲಿ ಈಗ ಮೀನುಗಾರಿಕಾ ಉದ್ಯಮ ಮಚ್ಚುವ ಹಂತಕ್ಕೆ ತಲುಪಿದ್ದು, ಜಿಎಸ್ ಟಿ ನೀಡಿದ ಹೊಡೆತಕ್ಕೆ ತಾಳಲಾರದೇ ಜಿಲ್ಲೆಯ ಬಹುತೇಕ ಫಿಶ್ ಮಿಲ್ ಹಾಗೂ ಫಿಶ್ ಆಯಿಲ್ ಕಂಪೆನಿಗಳು ಬೀಗ ಹಾಕಿವೆ.

ಜಿಎಸ್ ಟಿ ಗೊಂದಲದಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಈಗಾಗಲೇ ಹಲವಾರು ಔದ್ಯೋಗಿಕ ವಲಯಗಳು ತಮ್ಮ ತಮ್ಮ ಕಂಪೆನಿಗಳನ್ನು ಮುಚ್ಚುವ ಹಂತಕ್ಕೆ ಬಂದಿದ್ದು, ಆಟೋಮೊಬೈಲ್ ವಲಯ ಈಗಾಗಲೇ ವಾರದಲ್ಲಿ 2 ದಿನ ಕೆಲಸ ನಿಲ್ಲಿಸಿದೆ. ದೇಶದ ಬಹುತೇಕ ಕಂಪೆನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ.

ಈ ನಡುವೆ ಜಿಎಸ್ ಟಿ ಹೊಡೆತಕ್ಕೆ ಕರಾವಳಿಯ ಮೀನುಗಾರರು ಕಂಗಾಲಾಗಿದ್ದು, ತೆರಿಗೆ ಅಧಿಕಾರಿಗಳಿಂದ ಫಿಶ್ ಮಿಲ್ ಕಂಪೆನಿ ಮಾಲೀಕರಿಗೆ ನೀಡುತ್ತಿರುವ ಕಿರುಕುಳಕ್ಕೆ ಕಂಗಾಲಾಗಿ ಕಾರ್ಖಾನೆಗಳನ್ನು ಮುಚ್ಚಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾರತದಲ್ಲಿ ಸುಮಾರು 56 ಮೀನಿನ ಪೌಡರ್ ಉತ್ಪಾದನಾ ಘಟಕಗಳಿದ್ದು, ಕರ್ನಾಟದಲ್ಲೇ 34 ಘಟಕಗಳಿವೆ. ಮೀನುಗಾರರ ಶೇ.70ರಷ್ಟು ಮೀನುಗಳು ಈ ಘಟಕಗಳಿಗೆ ಬರುತ್ತವೆ. ಘಟಕಗಳು ಸುಮಾರು 20,000 ಕೋಟಿ ರೂ. ವ್ಯವಹಾರವನ್ನು ಹೊಂದಿದ್ದು, ಸುಮಾರು 30,000ಕ್ಕೂ ಅಧಿಕ ಮಂದಿ ಈ ಘಟಕಗಳಲ್ಲಿ ನೇರವಾಗಿ ಉದ್ಯೋಗಿಗಳಾಗಿದ್ದಾರೆ.

ಜಿಎಸ್‌ಟಿ ಆರಂಭಕ್ಕೂ ಮುನ್ನ ಮೀನಿನ ಎಣ್ಣೆ ಉತ್ಪಾದನೆಗೆ ಉತ್ಪಾದಕರು ಶೇ.5ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದರು. ಜಿಎಸ್‌ಟಿ ಜಾರಿಗೊಳಿಸಿದ ಬಳಿಕ ಆ ತೆರಿಗೆ ಶೇ.12ಕ್ಕೆ ಏರಿಕೆಯಾಗಿದೆ. ಉತ್ಪಾದಕರು ಅಭ್ಯಂತರ ಮಾಡದೆ ಪ್ರಾಮಾಣಿಕವಾಗಿ ಈ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಆದರೂ ಇದೀಗ ಉದ್ಯಮಿಗಳನ್ನು ಜಿಎಸ್‌ಟಿ ಆರಂಭವಾದ ಅಂದರೆ 2017ರ ಜುಲೈನಿಂದ ಜಾರಿಗೆ ಬರುವಂತೆ ಶೇ. 5ರ ದರದಲ್ಲಿ ಪಿಶ್ ಪೌಡರ್‌ಗೂ ತೆರಿಗೆ ಪಾವತಿಸಲು ಬೆದರಿಕೆ ಹಾಕಿ ಉದ್ಯಮಿಗಳನ್ನು ವಂಚಕರಂತೆ ಪರಿಗಣಿಸುತ್ತಿರುವುದ್ದಾರೆ ಎಂದು ಆರೋಪಿಸಲಾಗಿದೆ.

ಉದ್ದಿಮೆದಾರರು ಈವರೆಗೂ ತಾವು ಮೀನು ಪಡೆಯುವ ಮೀನುಗಾರರಿಂದ ಯಾವುದೇ ರೀತಿಯಲ್ಲಿ ತೆರಿಗೆ ಸಂಗ್ರಹವನ್ನು ಮಾಡಿರುವುದಿಲ್ಲ. ರಾಜ್ಯ ಸರಕಾರಕ್ಕೆ ನೀಡಿದ ಜ್ಞಾಪಕ ಪತ್ರದ ಹೊರತಾಗಿಯೂ 2018ರ ಡಿಸೆಂಬರ್ 31ರಿಂದ ಸ್ಪಷ್ಟೀಕರಣ ನೀಡಿ 2017ರ ಜುಲೈ 1ರಿಂದ ಜಾರಿಗೆ ಬರುವಂತೆ ಶೇ.5 ತೆರಿಗೆ ನ್ನು ಅಧಿಕಾರಿಗಳು ವಿಧಿಸುತ್ತಿದ್ದಾರೆ.

ಈ ಬಗ್ಗೆ ಪ್ರಧಾನ ಮಂತ್ರಿ, ಹಣಕಾಸು ಸಚಿವರು ಹಾಗೂ ಸಂಸದರ ಗಮನಕ್ಕೆ ತಂದು ಮನವರಿಕೆ ಮಾಡಲಾಗಿತ್ತು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಇದೀಗ, ಇಲಾಖೆಯಿಂದ ತೆರಿಗೆ ಪಾವತಿಸದಿದ್ದಲ್ಲಿ ವಂಚನೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಫಿಶ್ ಮಿಲ್ ಮಾಲೀಕರು ಆರೋಪಿಸಿದ್ದಾರೆ. ಅಲ್ಲದೆ ಕೆಲವು ಉದ್ಯಮಿಗಳ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ.

ಅಗಸ್ಟ್ 1 ರಿಂದ ಮೀನುಗಾರಿಕಾ ಋತು ಆರಂಭವಾಗಿದ್ದರೂ ಮಳೆಯಿಂದಾಗಿ ಮೀನುಗಾರಿಕೆ ಈ ಬಾರಿ ತಡವಾಗಿ ಆರಂಭವಾಗಿದೆ. ಇತ್ತ ಮೀನುಗಾರಿಕೆಗೆ ತೆರಳಿ ಮೀನು ಹಿಡಿದು ಬಂದರು ಮೀನುಗಾರಿಕಾ ಉತ್ಪನ್ನ ಕಂಪೆನಿಗಳು ಬಾಗಿಲು ಹಾಕಿದ್ದರಿಂದ , ಮೀನು ಕೊಳ್ಳುವವರಿಲ್ಲದೆ ಬೋಟ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಈ ಹಿನ್ನಲೆಯಲ್ಲಿ ಮೀನುಗಾರಿಕೆಗೆ ತೆರಳದೆ ಬೋಟ್ ಮಾಲಿಕರು ಬಂದರಿನಲ್ಲಿ ಲಂಗರು ಹಾಕಿ ಕುಳಿತಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಾಲೀಕರು ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಹಿಡಿದ ರಾಶಿ ರಾಶಿ ಮೀನನ್ನು ಮತ್ತೆ ಸಮುದ್ರಕ್ಕೆ ಸುರಿಯುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಮೀನುಗಾರಿಕೆ ಕಾರ್ಮಿಕರು ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ.
ತೆರಿಗೆ ಅಧಿಕಾರಿಗಳು ಜಿಎಸ್ ಟಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಹಿನ್ನಲೆಯಲ್ಲಿ ಅಗಸ್ಟ್ 1 ರಿಂದ ಅನಿರ್ಧಿಷ್ಟಾವಧಿಗೆ ಪಿಶ್ ಮಿಲ್ ಗಳನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಾದ್ಯಂತ ಸುಮಾರು 30 ಸಾವಿರ ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ.

Facebook Comments

comments